ಅಂತಾರಾಜ್ಯ ಜಿಎಸ್‍ಟಿ ವಂಚನೆ ಬಯಲಿಗೆಳೆದ ವಾಣಿಜ್ಯ ತೆರಿಗೆ ಇಲಾಖೆ, ಗ್ರಾನೈಟ್ ಉದ್ಯಮಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

GST--011
ಬೆಂಗಳೂರು, ಸೆ.18-ಗ್ರಾನೈಟ್ ಉದ್ಯಮದಲ್ಲಿ ಜಿಎಸ್‍ಟಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸಿರುವ ಕರ್ನಾಟಕ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಉದ್ಯಮಿ ಯೊಬ್ಬರನ್ನು ಬಂಧಿಸಿದ್ದಾರೆ. ಅಂತಾರಾಜ್ಯ ಜಿಎಸ್‍ಟಿ ವಂಚನೆಯ ಮೊದಲ ಪ್ರಕರಣ ಇದಾಗಿದ್ದು, ಜಿಎಸ್‍ಟಿ ಜಾರಿಯ ಬಳಿಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಜಿಗಣಿಯ ನೀಲಕಂಠ ಎಕ್ಸ್ ಪೋರ್ಟ್ ಗ್ರಾನೈಟ್ ಸಂಸ್ಥೆಯ ಮಾಲೀಕ ಕುಲದೀಪ್ ಚೌದರಿ ಬಂಧಿತ ಆರೋಪಿ. ಈತನನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಧುರೈನಲ್ಲಿ ಬಂಧಿಸಿದ್ದಾರೆ. ರಾಜ್ಯದಲ್ಲಿ ಜಿಎಸ್‍ಟಿ ಕಾಯ್ದೆ ಜಾರಿಯಾದ ಬಳಿಕ ರಾಜ್ಯ ಸರ್ಕಾರ ಇ-ಸುಗಮ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ವ್ಯವಸ್ಥೆ ಜಾರಿಯಾದ ಬಳಿಕ ತೆರಿಗೆ ವಂಚನೆಗೆ ಕಡಿವಾಣ ಬಿದ್ದಿತ್ತು. ಇದರಿಂದ ಅಕ್ರಮ ವ್ಯವಹಾರ ನಡೆಸುತ್ತಿದ್ದ ಕುಲದೀಪ್ ಚೌದರಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಬೆಂಗಳೂರಿನಲ್ಲಿದ್ದ ತನ್ನ ಎಲ್ಲಾ ಗ್ರಾನೈಟ್ ವ್ಯವಹಾರಗಳನ್ನು ಮುಚ್ಚಿಟ್ಟು ಮಧುರೈಗೆ ಪರಾರಿಯಾಗಿದ್ದ. ಅಲ್ಲಿ ಗ್ರಾನೈಟ್ ವ್ಯವಹಾರ ಆರಂಭಿಸಿದ್ದ ಎಂದು ತಿಳಿದುಬಂದಿದೆ.

ಕುಲದೀಪ್ ಚೌದರಿ ನಡೆಸಿದ್ದ ತೆರಿಗೆ ವಂಚನೆ ಬಗ್ಗೆ ಮಾಹಿತಿ ಪಡೆದ ದಕ್ಷಿಣ ವಲಯ ವಾಣಿಜ್ಯ ತೆರಿಗೆ ಇಲಾಖೆ (enforcement) ಹೆಚ್ಚುವರಿ ಆಯುಕ್ತ ನಿತೀಶ್ ಕೆ ಪಾಟೀಲ್   ಅವರು ಜಾರಿ ವಿಭಾಗದ ಸಹಾಯಕ ಆಯುಕ್ತ ಮುಹಮ್ಮದ್ ರಫೀ ಪಾಷ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.  ಈ ತಂಡ ಚೌದರಿ ನಡೆಸುತ್ತಿದ್ದ ಎಲ್ಲಾ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಿತು. ಅವರು ಬಳಸುತ್ತಿದ್ದ ಇಮೇಲ್, ಇಂಟರ್‍ನೆಟ್, ಮೊಬೈಲ್ ಸಂಖ್ಯೆಗಳ ಜಾಡು ಹಿಡಿದು ತನಿಖೆ ನಡೆಸಿದಾಗ ಆತ ಮಧುರೈನಲ್ಲಿ ಇರುವುದು ಪತ್ತೆಯಾಗಿದೆ.

ತಕ್ಷಣ ಈ ತಂಡ ಮಧುರೈನ ಅಧಿಕಾರಿಗಳ ಸಹಾಯ ಪಡೆದು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಅಧಿಕಾರಿಗಳು ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಿದೆ. ಜಿಎಸ್‍ಟಿ ಜಾರಿಯಾದ ಬಳಿಕ ಚೌದರಿ, ಕನಿಷ್ಠ 5ರಿಂದ 6 ಕೋಟಿ ರೂ.ತೆರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ತೆರಿಗೆ ವಂಚನೆ ಇನ್ನೂ ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin