ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಎಂ ವಿರುದ್ಧ ಬಿಎಸ್ವೈ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು,ಸೆ.19-ಸರ್ಕಾರಕ್ಕೆ ಅಸ್ಥಿರತೆ ಭೀತಿ ಎದುರಾಗಿರುವುದರಿಂದ ಬಿಜೆಪಿ ಶಾಸಕರನ್ನು ಸೆಳೆಯುವಂತಹ ಹೀನ ಕೃತ್ಯಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆರೋಪಿಸಿದರು.   ಯಾವ ಸಂದರ್ಭದಲ್ಲಿ ಸರ್ಕಾರ ಬೀಳುತ್ತದೆಯೋ ಎಂಬ ಆತಂಕ ಕುಮಾರಸ್ವಾಮಿ ಅವರಿಗಿದೆ. ಆದ್ದರಿಂದಲೇ ನಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದು ಎಂದಿಗೂ ಈಡೇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಗರದ ಅರಮನೆ ಮೈದಾನದಲ್ಲಿಂದು ನಡೆದ ರಾಜ್ಯ ಬಿಜೆಪಿ ವಿಶೇಷ ಶಾಸಕಾಂಗ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಶಾಸಕರ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಬೇರೆ ಪಕ್ಷದವರನ್ನು ಸೆಳೆದು ಸರ್ಕಾರವನ್ನು ಭದ್ರ ಮಾಡಿಕೊಳ್ಳುವ ಹುನ್ನಾರದಲ್ಲಿದ್ದಾರೆ. ನಮ್ಮ ಪಕ್ಷದ ಯಾವುದೇ ಶಾಸಕರು ಇದಕ್ಕೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಳೆದ ನಾಲ್ಕು ತಿಂಗಳಿಂದ ಸರ್ಕಾರ ಅಧಿಕಾರ ನಡೆಸುತ್ತಿದ್ದರೂ ಒಂದೇ ಒಂದೂ ಅಬಿವೃದ್ಧಿ ಕೆಲಸಗಳು ಆಗಿಲ್ಲ. ಅಧಿಕಾರಿಗಳ ವರ್ಗಾವಣೆ, ಹಗಲು ದರೋಡೆ ನಿರಂತರವಾಗಿ ನಡೆಯುತ್ತಿದೆ. ಈ ಸರ್ಕಾರ ಯಾವಾಗ ಬಿದ್ದು ಹೋಗುತ್ತದೆ ಎಂದು ಕಾಂಗ್ರೆಸ್-ಜೆಡಿಎಸ್ ಶಾಸಕರೂ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದ ಜನತೆಗೆ ಈ ಸರ್ಕಾರ ಇದ್ದು ಸತ್ತಂತಾಗಿದೆ ಎಂದು ಟೀಕಿಸಿದರು.

BJP--02

ಕಿಂಗ್‍ಪಿನ್‍ಗಳ ಮೂಲಕ ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರವಿದೆ. ಯಾವ ಕಾರಣಕ್ಕಾಗಿ ಇದುವರೆಗೂ ಕಿಂಗ್‍ಪಿನ್‍ಗಳನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ ಬಿಎಸ್‍ವೈ, ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮುಖ್ಯಮಂತ್ರಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಹಗರಣಗಳ ಸರಮಾಲೆಯನ್ನು ಸೃಷ್ಟಿಸಿಕೊಂಡಿರುವ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಉಳಿಸಿಕೊಂಡಿಲ್ಲ. ಕುಮಾರಸ್ವಾಮಿ, ರೇವಣ್ಣ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್‍ಗೆ ಮಾತ್ರ ಸರ್ಕಾರ ಬೇಕಾಗಿದೆ. ಅನೇಕ ಶಾಸಕರು ಸರ್ಕಾರ ಪತನವಾಗುವುದನ್ನೇ ಕಾಯುತ್ತಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದೀರಿ. ಯಾವುದೇ ಕಾರಣಕ್ಕೂ ನಾವು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.

BJP-Eshwarappa-And-Yaddyura

ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತಂತೆ ಶ್ವೇತಪತ್ರ ಹೊರಡಿಸಿ ಎಂದು ಹೇಳಿದರೆ, ನಾನು ಕೇಸರಿ ಪತ್ರ ಕೊಡಲು ಸಿದ್ಧ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಶ್ವೇತ ಪತ್ರಕ್ಕೆ ಇರುವ ಮಹತ್ವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಗೊತ್ತೇ ಎಂದು ಪ್ರಶ್ನಿಸಿದರು.  ಬೇರೆಯವರ ಭ್ರಷ್ಟಾಚಾರಗಳ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಯಾವ ನೈತಿಕತೆ ಇದೆ? ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭೂ ಕಬಳಿಕೆ ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ಮಾಜಿ ಸಚಿವ ಎ.ಮಂಜು ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡದ ನೀವು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

# ಪಕ್ಷ ಬಲಪಡಿಸಲು ಸೂಚನೆ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕನಿಷ್ಟ 20-23 ಕ್ಷೇತ್ರಗಳನ್ನು ನಾವು ಗೆಲ್ಲಬೇಕು. ಇದಕ್ಕಾಗಿ ಇಂದಿನಿಂದಲೇ ಶಾಸಕರು, ಪದಾಧಿಕಾರಿಗಳು, ಎಸ್ಸಿ ಎಸ್ಟಿ ಮಹಿಳಾ ಹಾಗೂ ರೈತ ಮೊರ್ಚಾಗಳು ಪಕ್ಷ ಸಂಘಟನೆಗಳಲ್ಲಿ ಪಾಲ್ಗೊಳ್ಳಬೇಕು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೋದಿ ಮಾಡಿರುವ ಕೇಂದ್ರ ಸರ್ಕಾರದ ಸಾಧನೆಗಳು, ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಎಂದು ಸೂಚಿಸಿದರು.

ಇನ್ನು 15-20 ದಿನಗಳಲ್ಲಿ ರಾಜ್ಯ ನಾಯಕರು ಪ್ರವಾಸ ನಡೆಸಲಿದ್ದಾರೆ. ಕಳೆದ ವಿಧಾನಸಬೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಕ್ಷೇತ್ರಗಳು ಸೇರಿದಂತೆ 224 ಕ್ಷೇತ್ರಗಳಲ್ಲೂ ಪಕ್ಷವನ್ನು ಬಲಪಡಿಸಲಾಗುವುದು. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸಲು ಎಲ್ಲ ಕಾರ್ಯಕರ್ತರು ಪಣ ತೊಡಬೇಕು ಎಂದು ಕರೆ ನೀಡಿದರು. ಒಂದು ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲ ಉಂಟಾದರೆ, ಪಕ್ಷ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಪಕ್ಷದ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ವಿಧಾನಸಭೆಯ ಉಪನಾಯಕ ಗೋವಿಂದ ಕಾರಜೋಳ, ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್ ಜೋಷಿ, ಶೇಟ್ಟರ್, ನಳಿನ್‍ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಶ್ರೀರಾಮುಲು, ಅರವಿಂದ ಲಿಂಬಾವಳಿ, ರವಿಕುಮಾರ್, ಆರ್.ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Facebook Comments

Sri Raghav

Admin