ಸೋಮಾರಿ ಅಧಿಕಾರಿಗಳಿಗೆ ಒಂದು ವಾರ ಡೆಡ್ ಲೈನ್ ಕೊಟ್ಟ ಸಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು, ಸೆ.19-ಸರ್ಕಾರ ಉಳಿಯುತ್ತೋ, ಬೀಳುತ್ತೋ ಎಂಬ ಉದಾಸೀನ ಚರ್ಚೆಯಲ್ಲಿ ಕಾಲಹರಣ ಮಾಡಿ ಕೆಲಸ ಮಾಡದೆ ಇರುವ ಅಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಅನಂತರವೂ ಎಚ್ಚೆತ್ತುಕೊಳ್ಳದಿದ್ದರೆ ಸರಿಯಾಗಿ ಚಾಟಿ ಬೀಸುತ್ತೇನೆ. ನನ್ನ ಇನ್ನೊಂದು ಮುಖದ ದರ್ಶನ ಮಾಡಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

ನಗರದ ಕೊಂಡಜ್ಜಿಬಸಪ್ಪ ಸಭಾಂಗಣದಲ್ಲಿ ಭಾರತ್‍ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 100ನೇ ರಾಜ್ಯ ಪರಿಷತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈವರೆಗೂ ನನ್ನ ಒಂದು ಮುಖ ನೋಡಿದ್ದಾರೆ. ಜವಾನನಿಂದ ಹಿಡಿದು ಎಲ್ಲರನ್ನು ಅಣ್ಣಾ… ಎಂದೇ ಗೌರವದಿಂದ ಕರೆಯುತ್ತೇನೆ. ಯಾರ ಮೇಲೂ ದರ್ಪ ತೋರಿಸಿಲ್ಲ, ಅಗೌರವಿಸಿಲ್ಲ. ಆದರೆ ಕೆಲವು ಅಧಿಕಾರಿಗಳು ಸರ್ಕಾರ ಉಳಿಯುತ್ತದೆಯೋ, ಇಲ್ಲವೋ, ಅತಂತ್ರ ಸರ್ಕಾರದ ಯೋಜನೆಗಳನ್ನು ನಾವೇಕೆ ಜಾರಿ ಮಾಡಬೇಕೆಂಬ ಚರ್ಚೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಖರ್ಚು ಮಾಡದೆ ಸುಮ್ಮನೆ ಇಟ್ಟುಕೊಳ್ಳುವುದಾದರೆ ನಾನೇಕೆ ಆಡಳಿತ ನಡೆಸಬೇಕು? ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಆಮೇಲೆ ನನ್ನದೇ ರೀತಿಯಲ್ಲಿ ಚಾಟಿ ಬೀಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಐದು ವರ್ಷ ನಾನು ಸರ್ಕಾರವನ್ನು ಕಾಯ್ದಿಟ್ಟುಕೊಳ್ಳುತ್ತೇನೆ, ಮುಖ್ಯಮಂತ್ರಿಯಾಗಿರುತ್ತೇನೆ. ಯಾರಿಗೂ ಆತಂಕ ಬೇಡ. ಈ ಮೊದಲು 20 ತಿಂಗಳು ಸಮ್ಮಿಶ್ರ ಸರ್ಕಾರ ನಡೆಸಿದ ಅನುಭವವಿದೆ. ಆಗ ನನ್ನ ವೈಯಕ್ತಿಕ ನಿರ್ಧಾರಗಳಿಂದಲ್ಲ, ಕೆಲವು ಬೆಳವಣಿಗೆಗಳಿಂದ ಸರ್ಕಾರ ಉಳಿಯಲಿಲ್ಲ. ಈಗ ನನಗೆ ಸಾಕಷ್ಟು ಅನುಭವವಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅನುಭವದ ಗರಡಿಯಲ್ಲಿ ಬೆಳೆದು ಬಂದಿದ್ದೇನೆ. ಸರ್ಕಾರವನ್ನು ಉಳಿಸಿಕೊಂಡೇ ಉಳಿಸಿಕೊಳ್ಳುತ್ತೇನೆ. ಯಾರಿಗೂ ಅನುಮಾನ ಬೇಡ.  ಕೆಲವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿ ಮಾಡಿಕೊಳ್ಳುತ್ತಿದ್ದಾರೆ. ಅವರ ಆಸೆ ನಾನೇಕೆ ಬೇಡ ಎನ್ನಲಿ. ಆದರೆ ಸರ್ಕಾರ ರಚಿಸಲು 113 ಜನ ಶಾಸಕರ ಸಂಖ್ಯಾಬಲ ಬೇಕಲ್ಲ. 104 ಮಂದಿ ಇಟ್ಟುಕೊಂಡು ಸರ್ಕಾರ ರಚಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿದರೆ ಹೃದಯಾಘಾತವಾಗುತ್ತದೆ. ನಾನು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವನು. ಸರ್ಕಾರ ಬಿದ್ದೇ ಹೋಗುತ್ತದೆ, ಶಾಸಕರು ಹೈದರಾಬಾದ್‍ಗೆ ಹೊರಟರು ಎಂಬೆಲ್ಲ ಸುದ್ದಿ ನೋಡಿಯೂ ಇನ್ನು ಮುಂದೆ ಬದುಕಿದ್ದೇನೆ ಎಂದರೆ ನನಗೆ ಅಧಿಕಾರದ ದಾಹ ಇಲ್ಲ.  ಮುಖ್ಯಮಂತ್ರಿ ಹುದ್ದೆ ಇರುತ್ತದೆ ಹೋಗುತ್ತದೆ. ಯಾವುದೂ ಶಾಶ್ವತವಲ್ಲ. ಇರುವಷ್ಟು ದಿನ ಜನರ ಕಣ್ಣೀರು ಒರೆಸಬೇಕು. ಇದು ನನ್ನ ಧ್ಯೇಯ. ಇಡೀ ದಿನ ಜನತಾದರ್ಶನ ನಡೆಸುತ್ತೇನೆ. ಮೂರ್ನಾಲ್ಕು ಗಂಟೆ ನಿಂತು ದೇಹ ದಂಡಿಸುತ್ತೇನೆ. ವಿಕಲಚೇತನರನ್ನು ಕೂರಿಸಿ ಅಹವಾಲು ಕೇಳುತ್ತೇನೆ. ಪ್ರತಿಯೊಬ್ಬರೂ ಕನಿಷ್ಠ 10 ನಿಮಿಷ ಮಾತನಾಡುತ್ತೇನೆ. ನನ್ನತೆ ಯಾರೂ ಜನತಾದರ್ಶನ ನಡೆಸಲು ಸಾಧ್ಯವಿಲ್ಲ ಎಂದರು.

ಇತ್ತೀಚೆಗೆ ಒಬ್ಬ ಬಾಲಕಿ ನನ್ನ ಬಳಿ ಬಂದಿದ್ದಳು. ಆಕೆಗೆ ತಂದೆ-ತಾಯಿ ಇಬ್ಬರೂ ಇಲ್ಲ. ಆಕೆ ತಾಯಿ ಸಾಯುವಾಗ ವೈದ್ಯಳಾಗುವಂತೆ ಭಾಷೆ ತೆಗೆದುಕೊಂಡಿದ್ದರಂತೆ. ಬಾಲಕಿ ನವೋದಯ ಶಾಲೆಯಲ್ಲಿ ಓದುತ್ತಿದ್ದು, ಶೇ.86ರಷ್ಟು ಅಂಕ ಗಳಿಸಿದ್ದಾಳೆ. ಮೆಡಿಕಲ್ ಸೇರಬೇಕಾದರೆ ಒಂದೂವರೆ ಕೋಟಿ, ಎರಡೂವರೆ ಕೋಟಿ ಖರ್ಚು ಮಾಡಬೇಕು. ಇಂಜಿನಿಯರಿಂಗ್ ಸೇರುವಂತೆ ಆಕೆಗೆ ಸಲಹೆ ಮಾಡಿದೆ. ಆದರೆ ಆಕೆ ತಾಯಿ ಆಸೆ ಈಡೇರಿಸಬೇಕು, ಮೆಡಿಕಲ್ ಸೀಟೇ ಬೇಕು. ಏನಾದರೂ ಮಾಡಿ ಎಂದು ನನ್ನ ಕೈಯಿಂದ 50 ಲಕ್ಷ ಖರ್ಚು ಮಾಡಿ ನವಲಗುಂದ ಆ ಬಾಲಕಿಗೆ ಮೆಡಿಕಲ್ ಸೀಟ್ ಕೊಡಿಸಿದ್ದೇನೆ.
ಮಾಧ್ಯಮಗಳು ಸರ್ಕಾರ ಮಾಡುವ ಒಳ್ಳೆಯ ಕೆಲಸಗಳನ್ನು ಗಮನಿಸಬೇಕು. ಯಾರೋ ರಾಜಕೀಯ ಪ್ರೇರಿತ ಆರೋಪಗಳು ಮಾಡಿದಾಗ ವೈಭವೀಕರಣ ಮಾಡುವುದು ಬೇಡ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‍ನಂತಹ ಸಂಸ್ಥೆಗಳಿಂದ ಶಾಂತಿ, ಸಾಮರಸ್ಯ ಉಳಿದಿದೆ. ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಈ ಸಂಸ್ಥೆಗಳಿಗೆ ಅಗತ್ಯವಾದ ಎಲ್ಲ ನೆರವು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರದಿಂದ ನೀಡುತ್ತಿರುವ 75 ರೂ. ಪ್ರೋತ್ಸಾಹ ಧನ ಸಾಲುವುದಿಲ್ಲ ಎಂಬುದು ನನಗೆ ಗೊತ್ತು. ಹೆಚ್ಚಿನ ನೆರವು ನೀಡಲು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಸ್ಕೌಟ್ಸ್ ಮತ್ತು ಗೈಡ್ಸ್, ಹೋಂಗಾರ್ಡ್ ಸಿಬ್ಬಂದಿಗಳಿಗೆ ಉದ್ಯೋಗ ಭದ್ರತೆ ಬಗ್ಗೆಯೂ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಪ್ರತಿವರ್ಷ 10 ಸಾವಿರ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಮಕ್ಕಳ ಸಂಖ್ಯೆಯನ್ನು ಇನ್ನು 10 ಸಾವಿರ ಹೆಚ್ಚಿಸಲು ಸರ್ಕಾರ ಸಿದ್ಧ ಎಂದು ಭರವಸೆ ನೀಡಿದರು. ಮಾಜಿ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದರು.

ಮೈಸೂರಿನ ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ, ಸಚಿವರಾದ ಎನ್.ಮಹೇಶ್, ಯು.ಟಿ.ಖಾದರ್,ವೆಂಟಕರಮಣ ನಾಡಗೌಡ, ಮೇಯರ್ ಸಂಪತ್ ರಾಜ್, ಅಧಿಕಾರಿಗಳಾದ ಶಾಲಿನಿ ರಜನೀಶ್, ಪಿ.ಸಿ.ಜಾಫರ್, ಮಂಜುಳಾ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯಸ್ಥರಾದ ಕೊಂಡಜ್ಜಿ ಷಣ್ಮುಗಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin