ಸಿಎಂಗೆ ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಇನ್ನುಮುಂದೆ ತಿಂಗಳಿಗೊಮ್ಮೆ ಜನತಾದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Cm-Janatadarshana

ಬೆಂಗಳೂರು, ಸೆ. 19- ಅನೇಕ ಆರೋಗ್ಯ ತೊಂದರೆಯಿಂದ ಬಳಲುತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ತಿಂಗಳಿಗೊಮ್ಮೆ ಜನತಾದರ್ಶನ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಯವರು ಸೆ.1 ರಿಂದ ಅಧಿಕೃತ ಚಾಲನೆ ನೀಡಿದ ಜನತಾದರ್ಶನ ಕಾರ್ಯಕ್ರಮವನ್ನು ತಿಂಗಳಿಗೊಮ್ಮೆ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಜನತಾದರ್ಶನ ಕಾರ್ಯಕ್ರಮ ತಿಂಗಳಿಗೊಮ್ಮೆ ನಡೆಯಲಿದೆ. ಒಂದು ತಿಂಗಳು ಬೆಂಗಳೂರಿನಲ್ಲಿ ಒಂದು ತಿಂಗಳು ಜಿಲ್ಲಾ ಕೇಂದ್ರದಲ್ಲಿ ಜನತಾದರ್ಶನ ನಡೆಸಲಾಗುವುದು. ದಿನಾಂಕ ಹಾಗೂ ಸ್ಥಳವನ್ನು ಮುಂಚಿತವಾಗಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

# ಜಿಲ್ಲಾವಾರು ಶಾಸಕರೊಂದಿಗೆ ಸಿ.ಎಂ ಸಭೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಇದ್ದಾಗ ಜಿಲ್ಲಾವಾರು ಶಾಸಕರ ಸಭೆ ನಡೆಸಲಿದ್ದಾರೆ. ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಭೋಜನದೊಂದಿಗೆ ನಡೆಸಲಿರುವ ಈ ಸಭೆಯಲ್ಲಿ ಜಿಲ್ಲೆಯ ಸ್ಥಳೀಯ ಸಮಸ್ಯೆಗಳು ಮತ್ತು ಅಭಿವೃದ್ಧಿ ಕೆಲಸಗಳ ಕುರಿತಂತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

# ರೈತರ ಸಾಲ ಮನ್ನಾ ಮಾಹಿತಿ ಒದಗಿಸಲು ಬ್ಯಾಂಕ್‍ಗಳಿಗೆ ಸೂಚನೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಭೂಮಿ ಮೇಲ್ವಿಚಾರಣಾ ಕೋಶ ಸಿದ್ಧಪಡಿಸಿರುವ ಸಾಲ ಮನ್ನಾ ತಂತ್ರಾಂಶಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಕುರಿತ ದತ್ತಾಂಶವನ್ನು ನೀಡುವಂತೆ ತಿಳಿಸಿ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಬ್ಯಾಂಕುಗಳಿಗೆ ಪತ್ರ ಬರೆದಿದ್ದಾರೆ. ಬ್ಯಾಂಕುಗಳಿಂದ ಮಾಹಿತಿ ಪಡೆದ ಕೂಡಲೇ, ಸಾಲ ಮನ್ನಾ ಹಣವನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುವ ಮುಖ್ಯಮಂತ್ರಿಗಳು, ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ನೀಡಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

# ಬೆಂಗಳೂರು ಅಭಿವೃದ್ಧಿಗೆ 570 ಕೋಟಿ ರೂ. ಅನುದಾನ ಬಿಡುಗಡೆ
ಬೆಂಗಳೂರಿನಲ್ಲಿ ವಿವಿಧ ಮೂಲಸೌಲಭ್ಯ ಕಾಮಗಾರಿಗಳಿಗೆ ಬಿಬಿಎಂಪಿಗೆ 570 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಬೆಂಗಳೂರಿನಲ್ಲಿ ಪ್ರಗತಿಯಲ್ಲಿರುವ ಗ್ರೇಡ್ ಸೆಪರೇಟರ್, ಫ್ಲೈ ಓವರ್‍ಗಳು, ರಸ್ತೆ ಅಭಿವೃದ್ಧಿ, ಮಳೆನೀರು ಚರಂಡಿ ಮತ್ತಿತರ ಮೂಲಸೌಲಭ್ಯಗಳನ್ನು ಒದಗಿಸುವ ಉದ್ದೇಶಕ್ಕೆ ಈ ಅನುದಾನ ಬಿಡುಗಡೆ ಮಾಡಲಾಗಿದೆ.

Facebook Comments

Sri Raghav

Admin