ಬೆಂಗಳೂರಿಗರೇ ಹುಷಾರ್..! ಎಲ್ಲೆಂದರಲ್ಲಿ ಹಸಿ ಕಸ ಎಸೆಯುವ ಮುನ್ನ ಈ ಸುದ್ದಿ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

Weasted-Food-on-Road
ಬೆಂಗಳೂರು, ಸೆ.19- ನಗರದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸಾರ್ವಜನಿಕರು ಎಲ್ಲೆಂದರಲ್ಲಿ ಹಸಿ ತ್ಯಾಜ್ಯ ಎಸೆಯುವುದೇ ಕಾರಣ. ಇನ್ನು ಮುಂದೆ ರಸ್ತೆ ಬದಿ ಆಹಾರ ಪದಾರ್ಥ ಹಾಕಬಾರದು. ಒಂದು ವೇಳೆ ಹೀಗೆ ಮಾಡಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು, ಸಾರ್ವಜನಿಕರ ಮೇಲೆ ದಾಳಿ ಮಾಡುವಂತಹ ನಾಯಿಗಳನ್ನು ನಾಶ ಮಾಡಲು ನಮಗೆ ಅಧಿಕಾರ ಇಲ್ಲ. ಯಾವುದೇ ಪ್ರಾಣಿಗಳ ವಧೆ ಮಾಡಬಾರದು, ಹಿಂಸೆ ಮಾಡಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ. ಜತೆಗೆ ಪ್ರಾಣಿದಯಾ ಸಂಘದವರೂ ಕೂಡ ಪ್ರಾಣಿಹಿಂಸೆ ವಿರೋಧಿಸಿ ಕೋರ್ಟ್‍ಗೆ ಹೋಗುವುದರಿಂದ ನಾಯಿಗಳನ್ನು ನಾಶಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ರಸ್ತೆ ಬದಿ ತಿಂಡಿ, ಆಹಾರ ಪದಾರ್ಥ ಹಾಕುವುದರಿಂದ ನಾಯಿಗಳು ದಾಳಿಗಿಳಿಯುತ್ತವೆ. ಈ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಪಾಲಿಕೆಯ ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೂ ಜನರಲ್ಲಿ ಅರಿವು ಮೂಡಿಸುವಂತೆ ಆದೇಶಿಸಲಾಗಿದೆ. ಜತೆಗೆ ಪೌರ ಕಾರ್ಮಿಕರು ಕೂಡ ಜನರಲ್ಲಿ ತಿಳುವಳಿಕೆ ಮೂಡಿಸುವರು. ಆದರೂ ರಸ್ತೆಗಳಲ್ಲಿ ಆಹಾರ ಪದಾರ್ಥಗಳನ್ನು ಯಾರೇ ಹಾಕಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಒಪ್ಪಿಕೊಂಡಿದ್ದ ಸರ್ವೋದಯ ಸರ್ಕಾರೇತರ ಸಂಸ್ಥೆ ಎಕ್ಸ್‍ಪೈರ್ ಆಗಿರುವ ಚುಚ್ಚುಮದ್ದು ಕೊಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಾಲಿಕೆ ಜಂಟಿ ನಿರ್ದೇಶಕರಿಂದ ತನಿಖೆ ಮಾಡಿಸುತ್ತಿದ್ದೇವೆ. ಒಂದು ವೇಳೆ ಸಂಸ್ಥೆ ತಪ್ಪು ಮಾಡಿರುವುದು ಸಾಬೀತಾದರೆ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಹೇಳಿದರು. ಇತ್ತೀಚೆಗೆ ನಾಯಿ ದಾಳಿಗೆ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಮಕ್ಕಳ ಆಯೋಗ ಬಿಬಿಎಂಪಿಗೆ ಶೋಕಾಸ್ ನೋಟಿಸ್ ನೀಡಿದೆ. ಆದಷ್ಟು ಬೇಗ ಆಯೋಗಕ್ಕೆ ಉತ್ತರ ನೀಡುತ್ತೇವೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರಾಣಿಗಳನ್ನು ವಧೆ ಮಾಡುವಂತಿಲ್ಲ. ಪ್ರಾಣಿದಯಾ ಸಂಘದ ಸೂಚನೆಯಂತೆ ನಾಯಿಗಳಿಗೆ ತೊಂದರೆ ಕೊಡುವಂತಿಲ್ಲ.

ಹಾಗಾಗಿ ನಾಯಿಗಳಿಗೆ ರೇಬಿಸ್ ರೋಗ ಬರದಂತೆ ಚುಚ್ಚುಮದ್ದು ನೀಡಬಹುದು ಹಾಗೂ ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಬಹುದು. ಅದು ಬಿಟ್ಟು ಮತ್ತಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಆಯೋಗಕ್ಕೆ ಮನವಿ ಮಾಡುತ್ತೇವೆ.  ಒಂದು ವೇಳೆ ಆಯೋಗ ಯಾವುದೇ ಸಲಹೆ-ಸೂಚನೆ ನೀಡಿದರೆ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

Facebook Comments

Sri Raghav

Admin