ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯ ಸರ್ಕಾರದ ಸುಪರ್ದಿಗೆ

ಈ ಸುದ್ದಿಯನ್ನು ಶೇರ್ ಮಾಡಿ

gokarna

ಗೋಕರ್ಣ, ಸೆ. 19- ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬಾರದು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತಕ್ಷಣಕ್ಕೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಇಂದು ನಿರಾಕರಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಮಠವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮಠದವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಈ ಮೂಲಕ 10 ವರ್ಷಗಳ ಬಳಿಕ ದೇಗುಲ ಮತ್ತೆ ಸರ್ಕಾರದ ಅಧೀನಕ್ಕೆ ಬಂದಂತಾಗಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪುರಾತನ ದೇಗುಲದ ಆಡಳಿತವನ್ನು ಇಂದು ಬೆಳಗ್ಗೆ ರಾಮಚಂದ್ರಾಪುರ ಮಠದಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಜಿಲ್ಲಾಡಳಿತದ ವಶಕ್ಕೆ ಪಡೆದರು. ಮುಜರಾಯಿ ಇಲಾಖೆಯ ಸೂಚನೆಯಂತೆ ಆಡಳಿತ ಹಸ್ತಾಂತರ ಮಾಡಿಕೊಂಡು ಆಡಳಿತಾಧಿಕಾರಿ ಎಚ್. ಹಾಲಪ್ಪ ಅವರಿಗೆ ಮಠದ ಉಸ್ತುವಾರಿಯನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಕುಮಟಾ ಉಪವಿಭಾಗಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಉಪಸ್ಥಿತರಿದ್ದರು.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ನೀಡಿ 2012ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ ರಾಜ್ಯ ಹೈಕೋರ್ಟ್ ಆ.10 ರಂದು ತೀರ್ಪು ನೀಡಿತ್ತು. ಸೆ. 10ರೊಳಗೆ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಮಠದಿಂದ ಹಸ್ತಾಂತರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು.

ಅದರಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗೋಕರ್ಣಕ್ಕೆ ತೆರಳಿ ದೇವಾಲಯದ ಆಸ್ತಿಗಳ ಮಹಜರು ನಡೆಸಿ ಪಟ್ಟಿಯನ್ನು ಹೈಕೋರ್ಟ್‍ಗೆ ಸಲ್ಲಿಸಿದ್ದರು. ಈ ನಡುವೆ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮಠ, ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ ಈ ಅರ್ಜಿಯನ್ನು ತಕ್ಷಣಕ್ಕೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಮಠವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. ದೇವಸ್ಥಾನ ಮೇಲುಸ್ತುವಾರಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ರಚಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಇಬ್ಬರು ಉಪಾಧಿವಂತರು ಹಾಗೂ ಸರ್ಕಾರದಿಂದ ಇನ್ನಿಬ್ಬರು ಸದಸ್ಯರನ್ನು ನೇಮಿಸುವಂತೆ ಸೂಚಿಸಿತ್ತು. ಸರ್ಕಾರ ಸಮಿತಿ ಸದಸ್ಯರನ್ನು ಇದುವರೆಗೂ ನೇಮಿಸಿಲ್ಲ. ಆದರೆ, ಆಡಳಿತಾಧಿಕಾರಿಯಾಗಿ ಎಚ್.ಹಾಲಪ್ಪ ಅವರನ್ನು ನೇಮಿಸಲಾಗಿದೆ. ಇನ್ನು ಮುಂದೆ ಅವರು ಮಠದ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ.

Facebook Comments

Sri Raghav

Admin