ಬಸ್ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

Arrested--01

ಬೆಂಗಳೂರು, ಸೆ.20- ಬಸ್ ಪ್ರಯಾಣಿಕರ ಬೆಳೆಬಾಳುವ ವಸ್ತುಗಳು ಮತ್ತು ಮನೆ ಕಳವು ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಕುಖ್ಯಾತ 8 ಮಂದಿ ಆರೋಪಿಗಳನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, 37.65 ಲಕ್ಷ ರೂ. ಮೌಲ್ಯದ 1.2 ಕೆ.ಜಿ. ತೂಕದ ಚಿನ್ನಾಭರಣ ಹಾಗೂ 3 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಬಂಗಾರಪೇಟೆ ತಾಲೂಕಿನ ಬೇತಮಂಗಲ ಹೋಬಳಿ ಕಮ್ಮಸಂದ್ರದ ಚಿಗರಾಪುರ ಗ್ರಾಮದ ನಿವಾಸಿಗಳಾದ ವೆಂಕಟೇಶ್ (39), ಲಕ್ಷ್ಮೀ (30), ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಸುಬ್ರಹ್ಮಣ್ಯ ಬಡಾವಣೆಯ ನಿವಾಸಿ ಮನುಕುಮಾರ್ (29), ತಮಿಳುನಾಡು ಮೂಲದ ಭಾಗ್ಯಮ್ಮ (50), ಮಾಗಡಿ ರಸ್ತೆಯ ಮಂಜ (24), ಜೀವನಪಾಳ್ಯದ ಅಮ್ಜದ್ (30), ಶಾಖಾಂಬರಿನಗರದ ಸಯ್ಯದ್ ಇಸ್ಮಾಯೀಲ್ (32) ಮತ್ತು ವಿದ್ಯಾರಣ್ಯನಗರದ ಸುರೇಶ್ (49) ಬಂಧಿತ ಆರೋಪಿಗಳು.

ಆರೋಪಿಗಳ ಬಂಧನದಿಂದ 26 ಸಾಮಾನ್ಯ ಕಳವು ಪ್ರಕರಣ, ಎರಡು ಮನೆಗಳವು ಸೇರಿ ಒಟ್ಟು 28 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ವಿರುದ್ಧ ಮಳವಳ್ಳಿ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಕುಣಿಗಲ್, ಗಿರಿನಗರ ಸೇರಿದಂತೆ ಇನ್ನೂ ಹಲವು ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.

ಉಪ್ಪಾರಪೇಟೆಯ 9 ಕಳವು, ಕಲಾಸಿಪಾಳ್ಯ ಠಾಣೆಯ 5, ಕಾಟನ್‍ಪೇಟೆಯ 3, ಸಿಟಿ ಮಾರ್ಕೆಟ್ ಠಾಣೆಯ 2, ಚಂದ್ರಲೇಔಟ್‍ನ 2, ಕೆಂಗೇರಿ, ಜ್ಞಾನಭಾರತಿ, ಎ.ಪಿ.ನಗರ ಪೊಲೀಸ್ ಠಾಣೆ, ವೈಯಾಲಿ ಕಾವಲ್ ಪೊಲೀಸ್ ಠಾಣೆ, ರಾಮನಗರದ ಐಜೂರು ಪೊಲೀಸ್ ಠಾಣೆಗಳ ತಲಾ 1 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ವಿಜಯನಗರ ಮತ್ತು ಕೆಂಗೇರಿ ಪೊಲೀಸ್ ಠಾಣೆಗಳ ತಲಾ ಒಂದು ಮನೆಗಳವು ಪ್ರಕರಣದಲ್ಲಿಯೂ ಆರೋಪಿಗಳು ಭÁಗಿಯಾಗಿರುವುದು ಬೆಳಕಿಗೆ ಬಂದಿದೆ.

Arrested--02

ಈ ಆರೋಪಿಗಳು ಬಸ್‍ನಲ್ಲಿ ಪ್ರಯಾಣಿಕರಂತೆ ಟಿಕೆಟ್ ಪಡೆದು ಪ್ರಯಾಣಿಕರ ಬ್ಯಾಗ್‍ಗಳಿಂದ ಚಿನ್ನದ ಆಭರಣಗಳನ್ನು ದೋಚುತ್ತಿದ್ದರು. ಮಾತ್ರವಲ್ಲ ಮನೆಗಳಲ್ಲೂ ಆಭರಣ ಕಳವು ಮಾಡುತ್ತಿದ್ದುದಾಗಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ 37.65 ಲಕ್ಷ ರೂ. ಬೆಳೆಬಾಳುವ ಒಂದು ಕೆಜಿ 255 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಸಯ್ಯದ್ ಇಸ್ಮಾಯೀಲ್ ಮತ್ತು ಸುರೇಶ್ ಎಂಬವರಿಂದ 3 ಜೇಬುಗಳವು ಪ್ರಕರಣಗಳಿಗೆ ಸಂಬಂಧಿಸಿ 3.9 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಿರಂಜನ್ ರಾಜ್ ಅರಸ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ಡಿ. ಸತೀಶ್ ಕುಮಾರ್, ಪಿಎಸ್‍ಐ ಶಿವಾನಂದ ಗುಡಗನಟ್ಟಿ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin