ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿಗೆ ಪ್ರೋತ್ಸಾಹ ಧನ ಹೆಚ್ಚಳ..?

ಈ ಸುದ್ದಿಯನ್ನು ಶೇರ್ ಮಾಡಿ

Milk

ಬೆಂಗಳೂರು, ಸೆ.20- ಆಮದು ಮರಳು ವಿಲೇವಾರಿ ಸಂಬಂಧದ ಮಾರ್ಗಸೂಚಿಗೆ ತಿದ್ದುಪಡಿ, ಸಿರಿಧಾನ್ಯ ಬೆಳೆ ವಿಸ್ತೀರ್ಣ ಹೆಚ್ಚಳ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡುವುದೂ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ಇಂದು ಸಂಜೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟಸಭೆ ನಡೆಯಲಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಸಿರಿಧಾನ್ಯ ಬೆಳೆ ವಿಸ್ತೀರ್ಣವನ್ನು 60ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳುವ ಸಂಭವವಿದೆ. ಇದಕ್ಕಾಗಿ ಸುಮಾರು 24 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಗಳಿವೆ.

ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರ ಕಾಪುದಾಸ್ತಾನು ಮಾಡಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಪಡೆಯುವ 400 ಕೋಟಿ ರೂ.ಗಳ ದುಡಿಯುವ ಬಂಡವಾಳದ ಬ್ಯಾಂಕ್ ಸಾಲಕ್ಕೆ ರಾಜ್ಯ ಸರ್ಕಾರ ಖಾತ್ರಿ ನೀಡುವ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 14000 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಗುಣಮಟ್ಟದ ಹಾಲಿನ ಸಂಗ್ರಹಣೆ ಆಧಾರದ ಮೇಲೆ ಪ್ರತಿ ಲೀಟರ್‍ಗೆ 20 ಪೈಸೆಯಂತೆ ಪ್ರೋತ್ಸಾಹ ಧನವನ್ನು ಸರ್ಕಾರದಿಂದ ನೀಡುವ ಬಗ್ಗೆ ಚರ್ಚಿಸಲಾಗುತ್ತದೆ. ಇದಕ್ಕಾಗಿ 27.50 ಕೋಟಿ ರೂ. ಅನುದಾನ ಮಂಜೂರು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಹಾಸನ ಜಿಲ್ಲೆಯಲ್ಲಿ 10ರಿಂದ 15 ಲಕ್ಷ ಲೀಟರ್ ಸಾಮಥ್ರ್ಯದ ಮೆಗಾ ಹಾಲಿನ ಡೈರಿ ನಿರ್ಮಾಣ ಮಾಡಲು 50 ಕೋಟಿ ರೂ. ಅನುದಾನ ಮಂಜೂರು ಮಾಡುವ ಸಾಧ್ಯತೆಗಳಿವೆ. ಆಮದು ಮರಳು ವಿಲೇವಾರಿ ಮಾಡಲು 2017ರಲ್ಲಿ ಹೊರಡಿಸಿದ ಮಾರ್ಗ ಸೂಚಿಗಳಿಗೆ ತಿದ್ದುಪಡಿ ಮಾಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಸಮಾಲೋಚಿಸಲಾಗುತ್ತದೆ. ಎಲ್ಲಾ ವರ್ಗದ ಉದ್ಯಮಶೀಲರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನೆರವು ನೀಡಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಶೇ.10ರಷ್ಟು ಬಡ್ಡಿ ಸಹಾಯ ಧನ ನೀಡುವ ಯೋಜನೆಗೆ ಸಂಪುಟ ಅನುಮೋದನೆ ನೀಡುವ ಸಾಧ್ಯತೆಗಳಿವೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕೃತ ಷೇರು ಬಂಡವಾಳವನ್ನು 350 ಕೋಟಿ ರೂ.ಗಳಿಂದ 500 ಕೋಟಿ ರೂ.ಗೆ ಹೆಚ್ಚಿಸುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin