ಏರ್‍ಸೆಲ್-ಮ್ಯಾಕ್ಸಿಸ್ ಒಪ್ಪಂದ : ತನಿಖೆಗೆ 3 ತಿಂಗಳು ಗಡುವು ವಿಸ್ತರಣೆ ಮಾಡಿದ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt

ನವದೆಹಲಿ, ಸೆ.20(ಪಿಟಿಐ)- ಬಹು ಕೋಟಿ ರೂ.ಗಳ ಏರ್‍ಸೆಲ್-ಮ್ಯಾಕ್ಸಿಸ್ ಒಪ್ಪಂದ ಪ್ರಕರಣದ ತನಿಖೆ ಪೂರ್ಣಗೊಳಿಸಲು ಜಾರಿ ನಿರ್ದೇಶನಾಲಯಕ್ಕೆ(ಇಡಿ) ನೀಡಿದ್ದ ಗಡುವನ್ನು ಸುಪ್ರೀಂಕೋರ್ಟ್ ಇಂದು ಮೂರು ತಿಂಗಳ ಕಾಲ ವಿಸ್ತರಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ, ಮೂರು ತಿಂಗಳುಗಳ ಒಳಗೆ ಈ ಪ್ರಕರಣದ ತನಿಖೆ ಪೂರ್ಣಗೊಳ್ಳಬೇಕೆಂದು ಸೂಚಿಸಿದೆ.

ಈ ಪ್ರಕರಣದಲ್ಲಿ ಹಲವಾರು ಮಿಂಚಂಚೆಗಳಿಗೆ(ಇ-ಮೇಲ್‍ಗಳ) ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕಾಗಿದ್ದು, ತನಿಖಾ ಸಂಸ್ಥೆಗೆ ಇನ್ನೂ ಎರಡು ಮೂರು ತಿಂಗಳ ಕಾಲಾವಕಾಶ ಬೇಕಿದೆ ಎಂದು ಇಡಿ ಪರ ನ್ಯಾಯಾಲಯಕ್ಕೆ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು.

2-ಜಿ ಸ್ಪೆಕ್ಟ್ರಂ ಪ್ರಕರಣಗಳ ಹಿನ್ನೆಲೆಯಲ್ಲಿ ಏರ್‍ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ನಡೆದ ಕೋಟ್ಯಂತರ ರೂ. ಹಣ ದುರ್ಬಳಕೆ ಪ್ರಕರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣದ ತನಿಖೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ತನಿಖಾ ಸಂಸ್ಥೆಗೆ ಮಾರ್ಚ್‍ನಲ್ಲಿ ಆರು ತಿಂಗಳ ಗಡುವು ನೀಡಿತ್ತು.

Facebook Comments

Sri Raghav

Admin