ಚುನಾವಣೆ ಮುಗಿದು 5 ತಿಂಗಳಾದರೂ ಸಿಗದ ಗೌರವಧನ, ಬಿಬಿಎಂಪಿ ನೌಕರರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

News-For-Money

ಬೆಂಗಳೂರು,ಸೆ.20- ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಐದು ತಿಂಗಳು ಕಳೆಯಿತು. ಲೋಕಸಭಾ ಚುನಾವಣೆಗೂ ಕಾಲ ಸನ್ನಿಹಿತವಾಗುತ್ತಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಗೌರವ ಧನ ಬಿಡುಗಡೆ ಮಾಡಲು ಬಿಬಿಎಂಪಿ ಮೀನಾಮೇಷ ಎಣಿಸುತ್ತಿರುವುದು ನೌಕರರ ಆಕ್ರೋಶಕ್ಕೆ ಎಡೆಮಾಡಿದೆ.

ಕಳೆದ ಮೇ 12ರಂದು ವಿಧಾನಸಭೆಗೆ ಚುನಾವಣೆ ನಡೆದಿತ್ತು. ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಗೋಲ್‍ಮಾಲ್ ನಡೆಯಬಾರದು, ಹಣ ಹಂಚಿಕೆಯಾಗಬಾರದು ಎಂಬ ಉದ್ದೇಶದಿಂದ ಪಾಲಿಕೆಯಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿತ್ತು. ಚುನಾವಣೆಗೆ ಒಂದು ತಿಂಗಳು ಮುನ್ನವೇ ಮಾಧ್ಯಮ ಕೇಂದ್ರದ ಉಸ್ತುವಾರಿಗೆ ನೂರಾರು ಸಿಬ್ಬಂದಿ ಮನೆ ಮಠ ಎಲ್ಲವನ್ನು ಮರೆತು ಮೂರು ಪಾಳಿಯದಲ್ಲಿ 24ಗಿ7 ರಂತೆ ನಿರಂತರವಾಗಿ ಕೆಲಸ ನಿರ್ವಹಿಸಿದರು.

ಚುನಾವಣಾ ಕಾರ್ಯಕ್ಕೆನಿಯೋಜನೆಗೊಂಡ ಈ ಸಿಬ್ಬಂದಿಗೆ ಪ್ರತಿನಿತ್ಯ 250ರಿಂದ 500 ರೂ.ವರೆಗೆ ಗೌರವಧನ ನಿಗದಿಪಡಿಸಲಾಗಿತ್ತು. ಈ ಹಿಂದೆ ಚುನಾವಣೆ ಆದ ತಕ್ಷಣ ಗೌರವ ಧನ ಕೊಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪಾಲಿಕೆ ಇತಿಹಾಸದಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ 500ಕ್ಕೂ ಹೆಚ್ಚು ಸಿಬ್ಬಂದಿಗೆ ಚುನಾವಣೆ ಮುಗಿದು 5 ತಿಂಗಳು ಕಳೆದರೂ ಗೌರವಧನ ಬಿಡುಗಡೆ ಆಗಿಲ್ಲ.

ಬಿಬಿಎಂಪಿಯಿಂದ ಸುಮಾರು ಒಂದು ಕೋಟಿ ಗೌರವಧನ ನೀಡಬೇಕಿದೆ. ಚುನಾವಣಾಧಿಕಾರಿಯಾಗಿದ್ದ ಬಿಬಿಎಂಪಿ ಸಹಾಯಕ ಆಯುಕ್ತ ನಟೇಶ್ ಅವರ ಬೇಜವಾಬ್ದಾರಿತನದಿಂದ ಇದುವರೆಗೂ ನಮಗೆ ಗೌರವಧನ ಸಿಕ್ಕಿಲ್ಲ. ಆದಷ್ಟು ಬೇಗ ಹಣ ನೀಡಿ ಎಂದು ಕೇಳಿದರೆ ಅವರು ಹಾರಿಕೆ ಉತ್ತರ ಕೊಡುತ್ತಾರೆ ಎಂದು ಬಿಬಿಎಂಪಿ ಸಿಬ್ಬಂದಿ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನಾವು ಈ ಹಿಂದೆ ಹಲವಾರು ಬಾರಿ ಚುನಾವಣೆ ಮಾಡಿದ್ದೇವೆ. ಆಗೆಲ್ಲ ಸಮಯಕ್ಕೆ ಸರಿಯಾಗಿ ಗೌರವಧನ ಸಿಗುತ್ತಿತ್ತು. ಆದರೆ ಈ ಬಾರಿ ನಟೇಶ್ ಅವರು ಐದು ತಿಂಗಳಾದರೂ ಗೌರವಧನ ಬಿಡುಗಡೆ ಮಾಡದೆ ಸತಾಯಿಸಿದ್ದಾರೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜಕ್ಕೆ ನಮ್ಮ ಕೈಲಾದ ಸೇವೆ ಸಲ್ಲಿಸಬೇಕು. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದೆವು. ಆದರೆ ಸರಿಯಾದ ಪ್ರತಿಫಲ ಸಿಗಲಿಲ್ಲ. ಹೀಗೆ ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವುದು ಹೇಗೆ? ಆಯುಕ್ತ ಮಂಜುನಾಥ್ ಪ್ರಸಾದ್, ಮೇಯರ್ ಸಂಪತ್‍ರಾಜ್ ಅವರು ಆದಷ್ಟು ಬೇಗ ಗೌರವಧನ ಕೊಡಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದರು.

Facebook Comments

Sri Raghav

Admin