ಸರ್ಜಿಕಲ್ ಸ್ಟ್ರೈಕ್ 2ನೇ ವರ್ಷಾಚರಣೆಗೆ ಮೋದಿ ಸರ್ಕಾರ ಸಿದ್ದತೆ

ಈ ಸುದ್ದಿಯನ್ನು ಶೇರ್ ಮಾಡಿ

Surgical-Strike--01

ನವದೆಹಲಿ, ಸೆ.20-ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಭಾರತೀಯ ಸೇನಾಪಡೆ 2016ರ ಸೆಪ್ಟೆಂಬರ್ 29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್(ನಿರ್ದಿಷ್ಟ ದಾಳಿ)ನ ದ್ವಿತೀಯ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.  ದೆಹಲಿಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ನಿನ್ನೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ಧಾರೆ. ಈ ತಿಂಗಳ 29ರಂದು ಶನಿವಾರ ಸರ್ಜಿಕಲ್‍ಸ್ಟ್ರೈಕ್ ಎರಡನೇ ವರ್ಷ ಪೂರ್ಣಗೊಳಿಸಲಿದೆ. ನಾವು ಈ ದಿನವನ್ನು ವಿಜಯೋತ್ಸವದ ರೀತಿ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಅವರು ವಿವರಿಸಿದರು.

ಭಾರತೀಯ ಕಮ್ಯಾಂಡೋಗಳು ಪಿಒಕೆಗೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಮಿಂಚಿನ ದಾಳಿ ನಡೆಸಿ 30ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿ ಭಾರತದ ಸಾಮಥ್ರ್ಯವನ್ನು ಜಗತ್ತಿಗೆ ತೋರಿಸಿತ್ತು ಎಂದು ಅವರು ಹೇಳಿದ್ದಾರೆ.  ದೇಶದ ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸುವ ಸಮರ್ಥ ನಾಯಕನ ಕೈಯಲ್ಲಿ ಭಾರತವಿದೆ. ರಾಷ್ಟ್ರಕ್ಕೆ ಉತ್ತಮ ನಾಯಕತ್ವ ದೊರೆತಿದೆ ಎಂದು ಸಚಿವರು ಪ್ರಧಾನಿ ಮೋದಿಯವರ ಗುಣಗಾನ ಮಾಡಿದರು.

# ಸೆ.28 ‘ಸರ್ಜಿಕಲ್ ಸ್ಟ್ರೈಕ್’ ದಿನ
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದೊಳಗೆ ನುಗ್ಗಿ ಭಯೋತ್ಪಾದಕರನ್ನು ಹತ್ಯೆಗೈದು ಪರಾಕ್ರಮ ಮೆರೆದಿದ್ದ ಸೈನಿಕರ ಶೌರ್ಯ-ಸಾಹಸವನ್ನು ಶಾಶ್ವತವಾಗಿರಸಲು ಸೆ.28ರಂದು ಸರ್ಜಿಕಲ್ ಸ್ಟ್ರೈಕ್ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸೆ.28ರಂದು ದೇಶಾದ್ಯಂತ ಪ್ರತಿಯೊಂದು ಲೋಕಸಭೆ, ವಿಧಾನಸಭೆ ಸೇರಿದಂತೆ ಎಲ್ಲೆಡೆ ಸರ್ಜಿಕಲ್ ಸ್ಟ್ರೈಕ್ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿ ಸೈನಿಕರ ಶೌರ್ಯವನ್ನು ಸ್ಮರಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ವಿಶೇಷವಾಗಿ ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳಲ್ಲು ಇದನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿರುವ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಮೂಲಕ ಬಿಜೆಪಿ ದೇಶ ಕಾಯುವ ಸೈನಿಕರ ಪರವಾಗಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡಿ ಎಂದು ಕೇಂದ್ರ ಸೂಚನೆ ಕೊಟ್ಟಿದೆ.

ಈಗಾಗಲೇ ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, 16ರಿಂದ 28ರವರೆಗೆ ನಿರಂತರವಾಗಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆಗೆ ಮತದಾರರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಕೇಂದ್ರ ಸರ್ಕಾರ ಸೆ.28ರಂದು 2ನೇ ವರ್ಷದ ಸರ್ಜಿಕಲ್ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳೇ ಈ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ನಿರ್ದೇಶನ ನೀಡಲಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಚುನಾವಣೆಯ ಪ್ರಮುಖ ವಿಷಯಗಳಲ್ಲೊಂದಾಗಲಿದೆ. ಪಾಕಿಸ್ತಾನದ ಗಡಿಪ್ರದೇಶದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಸೈನಿಕರು ಸೀಮಿತ ದಾಳಿ ಮಾಡಿರುವುದು ಸಾಮಾನ್ಯ ಮಾತಲ್ಲ. ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾರ್ಗಿಲ್ ಮೇಲೆ ದಾಳಿ ನಡೆಸಿದ ಪಾಕ್ ಸೈನಿಕರ ವಿರುದ್ದ ಹಿಮ್ಮೆಟ್ಟಿಸಿ ಭಾರತ ವಿಜಯದ ಪತಾಕೆ ಹಾರಿಸಿತ್ತು. ಹೀಗಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇದೇ ರೀತಿ ಸರ್ಜಿಕಲ್ ದಿನಾಚರಣೆಯನ್ನು ಮಾಡಲು ಕೇಂದ್ರ ಸರ್ಕಾರ ಆಲೋಚಿಸಿದೆ.

2016 ಸೆ.28ರಂದು ಭಾರತೀಯ ಸೇನಾಪಡೆ ಪಿಒಕೆಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಪಾಕಿಸ್ತಾನ ಬೆಂಬಲಿತ ಅನೇಕ ಭಯೋತ್ಪಾದಕ ನೆಲೆಗಳ ಮೇಲೆ ಒಂದೇ ರಾತ್ರಿಯಲ್ಲಿ ದಾಳಿ ಮಾಡಿ ಧ್ವಂಸ ಮಾಡಿತ್ತು. ಈ ಮಿಂಚಿನ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಹತರಾಗಿದ್ದರು.

Facebook Comments

Sri Raghav

Admin