‘ಇರುವುದೆಲ್ಲವ ಬಿಟ್ಟು’ ಈ ವಾರ ತೆರೆಗೆ ಬರುತ್ತಿದೆ ಈ ಸಿನಿಮಾ

ಈ ಸುದ್ದಿಯನ್ನು ಶೇರ್ ಮಾಡಿ

Iruvudellava-bittu

ಇವತ್ತಿನ ಯುವ ಪೀಳಿಗೆಗಳಿಗೆ ಹೊಂದುವಂತಹ ವಿಭಿನ್ನ ಕಥಾಹಂದರವುಳ್ಳಂತಹ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಇದೇ ವಾರ ಬಿಡುಗಡೆಯಾಗುತ್ತಿದೆ. ಮೇಘನಾರಾಜ್, ತಿಲಕ್, ಶ್ರೀ ಮಹದೇವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇರುವುದೆಲ್ಲವ ಬಿಟ್ಟು ಚಿತ್ರವು ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಠಿ ಮೊನ್ನೆ ನಡೆಯಿತು. ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡುತ್ತಾ, ನಾವು ಇಂದಿನ ಯಾಂತ್ರಿಕ ಬದುಕಿಗೆ ಕೊಡುವಷ್ಟು ಮಹತ್ವವನ್ನು ನಮ್ಮ ಸುತ್ತ ಮುತ್ತಲಿರುವ ಸಂಬಂಧಗಳಿಗೆ ಕೊಡುತ್ತಿಲ್ಲ. ನಮ್ಮ ಜೀವನದಲ್ಲಿ ಕೆರಿಯರ್ ಹಿಂದೆ ಓಡುವವರೇ ಹೆಚ್ಚು. ಈ ಒಂದು ಓಡಾಟದಲ್ಲಿ ನಾವು ನಮ್ಮನೇ ಮರೆಯುತ್ತಿದ್ದೇವೆ ಎಂಬ ಸಂಗತಿಯೂ ನಮಗೆ ಅರ್ಥವಾಗದಂತೆ ಹೋಗಿದೆ.

ಈ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಕಥೆ ಮಾಡಿರುವ ನನಗೆ ಮೇಘನಾ, ತಿಲಕ್ ಹಾಗೂ ಶ್ರೀ ಮಹದೇವ್ ಸಿಕ್ಕರು. ನನ್ನ ಕನಸಿನ ಪಾತ್ರಗಳಿಗೆ ಜೀವ ತುಂಬಿದವರು ಇವರೇನೇ. ಮೇಘನಾ ಅವರನ್ನು ಚಿತ್ರದಲ್ಲಿ ಮೂರು ಶೇಡ್‍ಗಳಲ್ಲಿ ಕಾಣಬಹುದು. ಹೇಗೆ ಓರ್ವ ದುಡಿಯುವ ಹೆಣ್ಣು ತನ್ನ ಜೀವನದಲ್ಲಿ ವಿಧ ವಿಧವಾದ ಅನುಭವವನ್ನು ಹೊಂದುತ್ತಾಳೆ ಎಂಬುದನ್ನು ಮೇಘನಾ ಹೇಳುತ್ತಾರೆ. ತಿಲಕ್ ಅವರು ದೇವ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಮಗೆ ಸಿಗುವುದೊಂದು ಜೀವನ. ಅದನ್ನು ಚಿಂದಿ ಉಡಾಯಿಸಬೇಕು ಎಂದು ಬದುಕುವ ಹುಡುಗ. ಮಹದೇವ್ ಅವರದ್ದು ಇನ್ನೊಂದು ವಿಚಿತ್ರ ಪಾತ್ರ. ಗೊಂಬೆ ಮಾರುವ ಶಾಪ್ ನಡೆಸುವ ಆತ ಸದಾ ಕಲರ್‍ಫುಲ್ ಆಗಿ ಬದುಕಲು ಇಚ್ಛಿಸುತ್ತಾನೆ.

ಇದಿಷ್ಟು ಪಾತ್ರಗಳು ಪ್ರಮುಖವಾಗಿ ಮೂಡಿಬರಲಿವೆ. ನಮ್ಮ ಚಿತ್ರದ ಪ್ರೊಡ್ಯುಸರ್ ದೇವರಾಜ್, ಸಂಗೀತ ಒದಗಿಸಿದ ಶ್ರೀಧರ್ ವಿ.ಸಂಭ್ರಮ್, ಛಾಯಗ್ರಾಹಕ ವಿಲಿಯಮ್ ಹಾಗೂ ಇಡೀ ಚಿತ್ರತಂಡ ನನಗೆ ಸಹಕಾರಿ ನೀಡಿತು ಎಂದು ಹೇಳಿದರು. ಚಿತ್ರತಂಡ ಪ್ರೇಕ್ಷಕರಿಗಾಗಿ ಇರುವುದೆಲ್ಲವ ಬಿಟ್ಟು ಸಿನಿಮಾ ಚಾಲೆಂಜ್‍ಅನ್ನು ಏರ್ಪಡಿಸಿತ್ತು. ಪ್ರೇಕ್ಷಕರಿಗೆ ಒಂದು ಕಡೆ ಸಿನಿಮಾ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ಚಾಲೆಂಜನ್ನು ಅಕ್ಸೆಪ್ಟ್ ಮಾಡಿದವರು ಕುಟುಂಬ ಸಮೇತ ಬಂದು ಚಿತ್ರ ವೀಕ್ಷಿಸಿದರು. ಶೋ ಹೌಸ್‍ಫುಲ್ ಆಗಿತ್ತು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡದಲ್ಲಿ ಹೊಸ ಕಾನ್ಫಿಡೆನ್ಸ್ ಚಿಮ್ಮಿದೆಯೆಂತೆ.

ಚಿತ್ರದ ನಿರ್ಮಾಪಕ ದಾವಣಗೆರೆ ದೇವರಾಜ್ ಮಾತನಾಡಿ, ಇದು ನಾನು ನಿರ್ಮಿಸುತ್ತಿರುವ ಮೊದಲ ಚಿತ್ರವೇ ಆಗಿದ್ದರೂ, ಚಿತ್ರತಂಡದಿಂದ ನನಗೆ ಸಿಕ್ಕ ಬೆಂಬಲ ಮಾತ್ರ ಅಪರಿಮಿತವಾದದ್ದು. ನಿರ್ದೇಶಕ ಕಾಂತ ಕನ್ನಲ್ಲಿ ಅವರು ಚಿತ್ರದ ಕಥೆ ಹೇಳಿದ ಕೂಡಲೇ ಈ ಸಿನಿಮಾವನ್ನು ತೆರೆಮೇಲೆ ತರಬೇಕು ಎಂಬ ಆಸೆ ಉಮ್ಮಡಿಸಿತು. ನಿಜಕ್ಕೂ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಂದು ಒಳ್ಳೆಯ ಚಿತ್ರಕ್ಕೆ ಬಂಡವಾಳ ಹಾಕಿದ ತೃಪ್ತಿ ನನಗಿದೆ. ಚಿತ್ರತಂಡ ನನಗೆ ನೀಡಿದ ಸಹಕಾರ ನಾನೆಂದು ಮರೆಯಲಾರೆ.

ಮೇಘನಾ, ತಿಲಕ್ ಹಾಗೂ ಶ್ರೀ ಅವರೇ ಚಿತ್ರದ ಪ್ರಮೋಷನ್ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರೆ. ಅವರೇ ಪ್ರಚಾರ ಹೀಗೆ ಮಾಡೋಣ, ಹಾಗೆ ಮಾಡೋಣ ಎಂದು ಸ್ವಇಚ್ಛೆಯಿಂದ ಮುಂದೆ ಬರುತ್ತಿದ್ದಾರೆ. ಕಾಂತ ಕನ್ನಲ್ಲಿ ಅವರಂತೂ ತುಂಬಾ ಕಾಳಜಿ ವಹಿಸಿ ಚಿತ್ರವನ್ನು ಕಟ್ಟುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಉಳಿದಂತೆ ಕಲಾವಿದರು ಕೂಡ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳಷ್ಟು ನಿರೀಕ್ಷೆಯೊಂದಿಗೆ ಇರುವುದೆಲ್ಲವ ಬಿಟ್ಟು ಪರದೆ ಮೇಲೆ ಬರುತ್ತಿದೆ.

Facebook Comments

Sri Raghav

Admin