ಕನ್ನಡದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Sadashiva-Brahamvaraಬೆಂಗಳೂರು, ಸೆ.20- ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರ ಅಂತ್ಯಕ್ರಿಯೆಯು ಬನಶಂಕರಿಯ ಚಿತಾಗಾರದಲ್ಲಿ ನೆರವೇರಿತು. ಬ್ರಹ್ಮಾವರ್ (90) ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯಾಹ್ನವೇ ಮೃತಪಟ್ಟಿದ್ದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

2017ರಲ್ಲಿ ಬ್ರಹ್ಮಾವರ್ ಅವರ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿದ್ದ ಸುದ್ದಿಯಿಂದ ಬೇಸರಗೊಂಡಿದ್ದ ಅವರು, ತಮ್ಮ ಸಾವಿನ ಸುದ್ದಿಯನ್ನು ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆಯವರಿಗೆ ತಿಳಿಸಬಾರದು ಎಂದು ಹೇಳಿದ್ದರು ಎಂದು ಕೂಡ ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

# ಸ್ಟಾರ್ ನಟರುಗಳ ಪಿತಾಮಹ:
ಚಿತ್ರರಂಗದಲ್ಲಿ ಸುಮಾರು 6 ದಶಕಗಳಿಗಿಂತಲೂ ಹೆಚ್ಚಿನ ಕಾಲ ಕಲಾಸೇವೆ ಸಲ್ಲಿಸಿರುವ ಸದಾಶಿವ ಬ್ರಹ್ಮಾವರ್ ಅವರು ಚಿತ್ರರಂಗದ ಸ್ಟಾರ್ ನಟರುಗಳಾದ ಡಾ||ರಾಜ್‍ಕುಮಾರ್, ಡಾ||ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಕರಾಟೆ ಕಿಂಗ್ ಶಂಕರ್‍ನಾಗ್, ಅನಂತ್‍ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್ ಮುಂತಾದವರೊಂದಿಗೆ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಚಿತ್ರರಂಗದ ಖಾಯಂ ಪೋಷಕ ನಟರೆಂದೇ ಬಿಂಬಿಸಿಕೊಂಡಿದ್ದ ಬ್ರಹ್ಮಾವರ್ ರೆಬೆಲ್‍ಸ್ಟಾರ್ ಅಂಬರೀಷ್ ಅಭಿನಯದ ಗರುಡಧ್ವಜದಲ್ಲಿ ಮುಖ್ಯ ಖಳನಾಗಿಯೂ ಗಮನ ಸೆಳೆದಿದ್ದರು. ಉಡುಪಿ ಜಿಲ್ಲೆಯಲ್ಲಿ ಜನಿಸಿದ್ದ ಬ್ರಹ್ಮಾವರ್ ಅವರು 150 ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಹಲವು ಧಾರಾವಾಹಿಗಳಲ್ಲೂ ತಮ್ಮ ನಟನೆಯಿಂದ ಗುರುತಿಸಿಕೊಂಡಿದ್ದರು. ಬೆಟ್ಟದ ಹೂವು, ಏಳು ಸುತ್ತಿನ ಕೋಟೆ, ಬಣ್ಣದ ಗೆಜ್ಜೆ , ಸಂಯುಕ್ತಾ ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು.

Sadashiva--01

# ಸಂತಾಪ:
ಸದಾಶಿವ ಬ್ರಹ್ಮಾವರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಕಲಾವಿದರ ಸಂಘದ ಅಧ್ಯಕ್ಷ ಅಶೋಕ್ ಸೇರಿದಂತೆ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin