ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ ನೆನಪಿರಲಿ, ನಿಮ್ಮ ಧಮ್ಕಿಗೆಲ್ಲ ಹೆದರಲ್ಲ : ಹೆಚ್ಡಿಕೆಗೆ ಬಿಎಸ್ವೈ ಎದುರೇಟು

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Vs-Yadiyurappa-ಬೆಂಗಳೂರು,ಸೆ.20- ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂಬುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮರೆಯಬಾರದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ನನ್ನ ಕೈಯಲ್ಲಿ ಅಧಿಕಾರವಿದೆ ಏನೂ ಬೇಕಾದರೂ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಕರ್ನಾಟಕದಲ್ಲಿ ನೀವು ಆಡಳಿತ ನಡೆಸುತ್ತಿರಬಹುದು. ಕೇಂದ್ರದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿ ಎಂಬುದನ್ನು ಮರೆತಂತಿದ್ದೀರಿ ಎಂದು ಗುಡುಗಿದರು.

ನನ್ನ ಇತಿಮಿತಿ ಏನೆಂಬುದನ್ನು ಅರಿತೇ ನಾನು ಮಾತನಾಡಿದ್ದೇನೆ. ಹದ್ದುಮೀರಿ ಮಾತನಾಡುತ್ತಿರುವುದು ನೀವು. ನಿಮ್ಮ ಈ ಧಮ್ಕಿಗೆ ನಾನು ಹೆದರುವುದಿಲ್ಲ, ಬಗ್ಗುವುದಿಲ್ಲ. ಅದೇನ್ ಮಾಡ್ಕೋತ್ತೀರೋ ಮಾಡಿಕೊಳ್ಳಿ ಎಂದು ಸವಾಲು ಹಾಕಿದರು.   ಮುಖ್ಯಮಂತ್ರಿ ಸ್ಥಾನವಾಗಲಿ ಅಥವಾ ಅಧಿಕಾರ ಯಾರಿಗೂ ಶಾಶ್ವತವಲ್ಲ. ಸೇಡಿನ ರಾಜಕಾರಣಕ್ಕೆ ನೀವು ಮುನ್ನುಡಿ ಬರೆದಿದ್ದೀರಿ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರೆ ನಾನು ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ. ನನಗೂ ರಾಜಕೀಯ ಮಾಡುವುದು ಗೊತ್ತು ಎಂದರು.

ನೀವು ಏನೇ ಮಾಡಿದರೂ ಅದಕ್ಕೆ ಪ್ರತಿಯಾಗಿ ನಮಗೂ ಏನು ಮಾಡಬೇಕೆಂಬುದು ಗೊತ್ತಿದೆ. ಎಂದಿಗೂ ನಾನು ಸೇಡಿನ ರಾಜಕಾರಣ ಮಾಡಿಲ್ಲ. ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಇದನ್ನೇ ಮಾಡುತ್ತಿದ್ದಾರೆ ಎಂದು ಟೀಕಿಸಿದರು.  ಶಿವರಾಮ ಕಾರಂತ ಬಡಾವಣೆಯಲ್ಲಿ ನಾನು ಕಾನೂನು ಬಾಹಿರವಾಗಿ ಯಾವುದೇ ರೀತಿ ಕ್ರಮ ಕೈಗೊಂಡಿದ್ದರೆ ತನಿಖಾ ಸಂಸ್ಥೆಗಳು ನಿಮ್ಮ ಕೈಯಲ್ಲೇ ಇವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲು ಮೀನಾಮೇಷವೇಕೆ? ಎಂದು ಪ್ರಶ್ನಿಸಿದರು.

ಶಿವರಾಮ ಕಾರಂತ ಬಡಾವಣೆಯಲ್ಲಿ ತನಿಖೆ ನಡೆಸಿದರೆ ಸತ್ಯಾಂಶ ಜನರಿಗೆ ತಿಳಿಯಲಿದೆ. ಅಪ್ಪ-ಮಕ್ಕಳು ಮೈಸೂರಿನಲ್ಲಿ ಎಷ್ಟು ಸೈಟು ಮಾಡಿಕೊಂಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ಎಲ್ಲವನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡುತ್ತೇವೆ. ನಿಮ್ಮ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.

# ಡಿಕೆಶಿ ವಿರುದ್ಧವೂ ವಾಗ್ದಾಳಿ:
ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ ಮಾಡಿದ ಬಿಎಸ್‍ವೈ, ನನ್ನನ್ನು ಜೈಲಿಗೆ ಹೋಗಿ ಬಂದವರು ಎಂದು ಹೇಳಲು ಅವರಿಗೆ ಯಾವ ನೈತಿಕತೆ ಇದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರ ವಿರುದ್ದವೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಿಮ್ಮ ಮೇಲೆ ಇಡಿ ಕೇಸ್ ದಾಖಲೆ ಮಾಡಿರುವುದಕ್ಕೂ ನಮ್ಮ ಪಕ್ಷಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದರು. ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಅನುಭವಿಸುತ್ತಾರೆ. ಅದನ್ನು ಬಿಟ್ಟು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದರು.

# ಯಡಿಯೂರಪ್ಪನವರೇ ನನ್ನ ತಾಳ್ಮೆ ಕೆಣಕಬೇಡಿ, ನಿಮ್ಮ ಬಣ್ಣ ಬಯಲು ಮಾಡ್ತಿನೀ ಹುಷಾರ್..!
ಬೆಂಗಳೂರು, ಸೆ.20- ಗಾಜಿನಮನೆಯಲ್ಲಿ ಕುಳಿತಿರುವ ಯಡಿಯೂರಪ್ಪನವರು ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು. ಸರ್ಕಾರ ನಮ್ಮ ಕೈಯಲ್ಲಿದೆ. ಇಲ್ಲಿಯವರೆಗೆ ತಾಳ್ಮೆ ಯಿಂದಿದ್ದೇನೆ. ಕೆದಕಿದರೆ ನಿಮ್ಮ ಇತಿಹಾಸವನ್ನೂ ಕೆದಕಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.  ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಡಿಯೂರಪ್ಪ ಅವರು ಗಾಜಿನ ಮನೆಯಲ್ಲಿದ್ದುಕೊಂಡು ನಮ್ಮ ವಿರುದ್ಧ ಲಘುವಾಗಿ ಮಾತನಾಡುತ್ತಿದ್ದಾರೆ. 2008ರಲ್ಲಿ ಅಪ್ಪ -ಮಕ್ಕಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿ ಅವರೇ ಜೈಲಿಗೆ ಹೋಗಿ ಬಂದರು. ಈಗ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ವಯಸ್ಸಿಗೆ ತಕ್ಕಂತಹ ಗಾಂಭೀರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರು ಹಿರಿಯರು. ರಾಜಕೀಯ, ವಯಸ್ಸು ಮತ್ತು ಅನುಭವದಲ್ಲಿ ನನಗಿಂತಲೂ ಹಿರಿಯರು. ಆದರೆ ರಾಜ್ಯ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಅವರ ಪದ ಬಳಕೆ ಸರಿಯಿಲ್ಲ. ಪದ ಬಳಕೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ಒಳ್ಳೆಯದು. ಇಲ್ಲದಿದ್ದರೆ ಅವರೇ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಪ್ಪ ಮಕ್ಕಳು ಲೂಟಿಕೋರರು ಎಂದು ಹೇಳುತ್ತಾ ಯಡಿಯೂರಪ್ಪ ತಿರುಗುತ್ತಿದ್ದಾರೆ. ಸರ್ಕಾರದಲ್ಲಿ ಪರ್ಸಂಟೇಜ್ ವ್ಯವಸ್ಥೆಯನ್ನು ಜಾರಿಗೆ ತಂದವರೇ ಯಡಿಯೂರಪ್ಪ. ಅವರು ಪರ್ಸಂಟೇಜ್‍ನ ಜನಕ. ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣ ಇನ್ನೂ ಸುಪ್ರೀಂಕೋರ್ಟ್‍ನಲ್ಲಿದೆ. ಅದನ್ನು ಮರೆಯಬೇಡಿ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

18 ಶಾಸಕರು ಮುಂಬೈಗೆ ಹೋಗಲು ಸಿದ್ಧರಾಗಿದ್ದಾರೆ. ನಾಳೆ ಬೆಳಗ್ಗಿಯೇ ವಿಮಾನದ ಮೂಲಕ ಪುಣೆ, ಮುಂಬೈಗೆ ಹೋಗುತ್ತಾರೆ ನೀವು ಬರುವುದಾದರೆ 5 ಕೋಟಿ ರೂ. ನೀಡುವುದಾಗಿ ಶಾಸಕ ಸುರೇಶ್ ಗೌಡ ಅವರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ. ಶಾಸಕ ಶಿವಳ್ಳಿ ಅವರನ್ನೂ ಸಂಪರ್ಕಿಸಲಾಗಿದೆ. ನಗರದ ಬೌರಿಂಗ್ ಇನ್ಸ್ ಸ್ಟಿಟ್ಯೂಟ್‍ನಲ್ಲಿ ಸಭೆ ನಡೆಸಿರುವುದು ಗೊತ್ತಿದೆ. ಇಲ್ಲಿಂದ 18 ಶಾಸಕರನ್ನು ಹೈಜಾಕ್ ಮಾಡಿ ಮಿಲ್ಟ್ರಿ ಭದ್ರತೆಯಲ್ಲಿ ಮತ್ತೆ ವಿಧಾನಸಭೆಗೆ ಕರೆದುಕೊಂಡು ಬರುವ ಯೋಜನೆ ರೂಪಿಸಿರುವುದು ಕೂಡ ಗೊತ್ತಾಗಿದೆ. ಆದರೆ ಪಾಪ ಯಡಿಯೂರಪ್ಪ ಅವರು ಇವೆಲ್ಲಾ ನಮಗೆ ಗೊತ್ತಿಲ್ಲ ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

 

Facebook Comments

Sri Raghav

Admin