ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ತುರುವೇಕೆರೆ ಪೊಲೀಸರು ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Turuvekere--01

ತುರುವೇಕೆರೆ, ಸೆ.20- ದ್ವಿಚಕ್ರ ವಾಹನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರಿಬ್ಬರನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದಿರಾನಗರದ ಸಂತೋಷ್ ಅಲಿಯಾಸ್ ಸಂತು (32) ಮತ್ತು ದೇವರಾಜು ಅಲಿಯಾಸ್ ದೇವ (34) ಬಂಧಿತ ಆರೋಪಿಗಳು.

ಕಳೆದ 18ರಂದು ಬೆಳಗ್ಗೆ 8 ಗಂಟೆಗೆ ತಾಲೂಕಿನ ಟಿ.ಬಿ.ಕ್ರಾಸ್ ಬಳಿ ಬೈಕ್‍ನಲ್ಲಿ ಆಗಮಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ನೋಡಿ ಬೈಕನ್ನು ಬೇರೆಡೆಗೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು. ಪೊಲೀಸರಿಗೆ ಅನುಮಾನ ಬಂದ ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ಪಟ್ಟಣದ ಸರ್ಕಲ್ ಇನ್ಸ್‍ಪೆಕ್ಟರ್ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದಾಗ ಇಬ್ಬರು ಆರೋಪಿಗಳು ಒಂದುವರೆ ವರ್ಷದ ಹಿಂದೆ ಬೇಟೆರಾಯಸ್ವಾಮಿ ದೇವಸ್ಥಾನದ ಬಳಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಸರ ಅಪಹರಿಸಿ, ನಂತರ ತುರುವೇಕೆರೆ ಟೌನ್‍ನ ಬಿರ್ಲಾ ಕಾರ್ನರ್ ಬಳಿ ಮನೆ ಬೀಗ ಮುರಿದು ಮನೆಯಲ್ಲಿದ್ದ ನಗದು ಹಾಗೂ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿ ಸಂತೋಷ ಹಾಸನ ಜಿಲ್ಲಾ ಪೊಲೀಸರಿಗೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಜೈಲಿಗೆ ಹೋಗಿಬಂದಿದ್ದಾನೆ. ಸುಮಾರು 4 ತಿಂಗಳ ಹಿಂದೆ ದೇವರಾಜನು ವಿದ್ಯಾನಗರದಲ್ಲಿ ಸ್ಟಾರ್ ಸಿಟಿ ಬೈಕನ್ನು ಕದ್ದು ಮನೆಯಲ್ಲಿಟ್ಟಿದ್ದು ಮತ್ತು ಒಂದುವರೆ ತಿಂಗಳ ಹಿಂದೆ ಸಂತೋಷನು ಪಟ್ಟಣದ ವಿಶ್ವ ವಿಜಯ ವಿದ್ಯಾ ಶಾಲೆಯ ಬಳಿ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಕಳ್ಳತನ ಮಾಡಿ ಅದೇ ಬೈಕಿನಲ್ಲಿ ಟಿ.ಬಿ.ಕ್ರಾಸ್ ಬಳಿ ಬರುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಆರೋಪಿಗಳಿಂದ 60 ಗ್ರಾಂನ ಚಿನ್ನದ ಸರ, 15 ಗ್ರಾಂ ಎರಡು ಜೊತೆ ಚಿನ್ನದ ಓಲೆ, ಒಂದು ಜೊತೆ ಮಾಟಿ, ಒಂದು ಬೆಳ್ಳಿಯ ಪೂಜಾ ತಟ್ಟೆ, ಬೆಳ್ಳಿಯ ಎರಡು ದೀಪಗಳು ಮತ್ತು ಎರಡು ಮೋಟಾರು ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ3,15,000ರೂ. ಎಂದು ಅಂದಾಜಿಸಲಾಗಿದೆ.

ಕುಣಿಗಲ್ ಉಪವಿಭಾಗದ ಡಿ.ವೈ.ಎಸ್.ಪಿ. ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ತುರುವೇಕೆರೆ ಸಿ.ಪಿ.ಐ. ಸಿ.ಡಿ.ಜಗದೀಶ್, ಪಿಎಸ್‍ಐ ರಾಜು ಜಿ.ಪಿ., ಎ.ಎಸ್.ಐ ಡಿ. ಕೃಷ್ಣಪ್ಪ ಸಿಬ್ಬಂದಿಗಳಾದ ಮಂಜುನಾಥ್, ಮಲ್ಲಿಕಾರ್ಜುನ್, ಮಧುಸೂಧನ, ರಾಜಕುಮಾರ್, ಜೀಪ್ ಚಾಲಕ ಪರಮೇಶ್ ಮತ್ತು ಪಾರ್ವತಮ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Facebook Comments

Sri Raghav

Admin