ಚಿಕ್ಕಬಳ್ಳಾಪುರದಲ್ಲಿ ದ್ವಿಚಕ್ರ ವಾಹನಗಳ ಕರ್ಕಶ ಶಬ್ದಕ್ಕೆ ಕೊನೆಗೂ ಬಿತ್ತು ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

Chikkaballapura-01

ಚಿಕ್ಕಬಳ್ಳಾಪುರ, ಸೆ.20- ನಗರದಲ್ಲಿ ಯುವಕರು ಮೋಜಿಗಾಗಿ ಓಡಿಸುವ ಬೈಕ್‍ನ ಕರ್ಕ ಶಬ್ದಗಳಿಗೆ ಹೆಣ್ಣು ಮಕ್ಕಳು ಕಕ್ಕಾಬಿಕ್ಕಿ. ಇದನ್ನು ಗಮನಿಸಿದ ಇಲ್ಲಿನ ಪೊಲೀಸರು ಸೈಲನ್ಸರ್‍ಗಳನ್ನು ಕಿತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಹೌದು! ಇಂಥ ಸನ್ನಿವೇಶಗಳು ನಗರದಾದ್ಯಂತ ಇತ್ತೀಚೆಗೆ ಹೇರಳವಾಗಿವೆ, ನಗರದ ಎಂಜಿ ರಸ್ತೆ, ಬಿಬಿ ರಸ್ತೆ, ಸರ್‍ಎಂವಿ ರಸ್ತೆ ಸೇರಿದಂತೆ ಶಾಲಾ-ಕಾಲೇಜುಗಳ ಬಳಿ ಯುವಕರು ಬೈಕ್‍ನ್ನು ಓಡಾಡುತ್ತಾ , ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು.

ಕಂಪನಿಯಿಂದ ಅಳವಡಿಸಿರುವ ಸೈಲನ್ಸರ್‍ಗಳನ್ನು ತೆಗೆಯಿಸಿ ಕರ್ಕಶ ಶಬ್ದ ಬರುವಂಥಹ ಸೈಲನ್ಸರ್‍ಗಳನ್ನು ಅಳವಡಿಸಿಕೊಂಡು ಮಹಿಳೆ ಹಾಗೂ ಹೆಣ್ಣು ಮಕ್ಕಳು ಅಡ್ಡಾಡುವ ದಾರಿಗಳಲ್ಲಿ ಜೋರಾಗಿ ಬೈಕ್‍ಗಳನ್ನು ಓಡಾಡಿಸುತ್ತಿರು ವರಲ್ಲದೆ ಕರ್ಕಶ ಶಬ್ದದೊಂದಿಗೆ ಅವರನ್ನು ವಿಚಲಿತರನ್ನಾಗಿ ಮಾಡುವವರು ಹೇರಳವಾಗಿದೆ.

ಈ ಬಗ್ಗೆ ಸಾರ್ವಜನಿಕರ ಮೌಖಿಕ ದೂರುಗಳಿಂದಾಗಿ ಎಚ್ಚೆತ್ತಿಕೊಂಡ ನಗರ ಹಾಗೂ ಸಂಚಾರಿ ಪೊಲೀಸರು ವೃತ್ತ ನಿರೀಕ್ಷಕ ಮಾರ್ಗದರ್ಶನ ಹಾಗೂ ನಗರ ಪೊಲೀಸ್ ಸಬ್ ಇನ್ಸ್‍ಫೆಕ್ಟರ್ ಅನಿಲ್‍ಕುಮಾರ್ ಅವರ ನೇತೃತ್ವದಲ್ಲಿ ಎಎಸ್‍ಐ ರಮೇಶ್ ಮತ್ತು ವೇಣುಗೋಪಾಲ್, ಕಾನ್‍ಸ್ಟೇಬಲ್‍ಗಳಾದ ವಾಸು ಸೇರಿದಂತೆ ಇನ್ನಿತರ ಪೊಲೀಸ್ ಪೇದೆಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇಂತಹ ಕರ್ಕಶ ಬೈಕ್‍ಗಳನ್ನು ತಪಾಸಣೆ ನಡೆಸಿ ಅಳವಡಿಸಲಾಗಿದ್ದ ಸೈಲೆನ್ಸರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿಂದ ಸರಿಸುಮಾರು 40ಕ್ಕೂ ಅಧಿಕ ಇಂಥಹ ಸೈಲೆನ್ಸರ್‍ಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕರ್ಕಶ ಶಬ್ದ ಮಾಡಿಕೊಳ್ಳವವರ ಸಂಖ್ಯೆ ಇದೀಗ ಕ್ಷೀಣಿಸುತ್ತಿದ್ದು , ಸಾರ್ವಜನಿಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಚಲಾವಣೆ, ಅತಿ ವೇಗ, ಅಜಾಗರೂಕತೆ, ಗಾಡಿ ಮತ್ತು ವ್ಯಕ್ತಿಯ ಚಾಲನಾ ಪರವಾನಗಿ ಇಲ್ಲದವುಗಳ ಬಗ್ಗೆ ತೀವ್ರ ನಿಗಾ ಇರಿಸಿ ಕ್ರಮ ಜರುಗಿಸುತ್ತಿದ್ದರ ಜೊತೆಗೆ ಇತ್ತೀಚೆಗೆ ಇಂಥಹ ಕರ್ಕಶ ಶಬ್ದವುಳ್ಳ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಕ್ರಮ ಜರುಗಿಸಲಾಗುತ್ತಿದೆ.

ಪೊಲೀಸರ ಈ ಕ್ರಮದಿಂದಾಗಿ ನಿತ್ಯ ಇಂಥಹ ಬೈಕ್ ಕರ್ಕಶ ಶಬ್ದಗಳ ಕಿರಿಕಿರಿಗೆ ಒಳಗಾಗಿದ್ದ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ವಯೋ ವೃದ್ಧರ ಪಾಲಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Facebook Comments

Sri Raghav

Admin