ಸಮಾಜಮುಖಿ ಕಾರ್ಯದಲ್ಲಿ ತೊಡಗಿದ ಯತಿರಾಜ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

Yatiraja--1

– ಶಿವಣ್ಣ

ಮೇಲುಕೋಟೆಯ ಯದುಗಿರಿ ಯತಿರಾಜ ಮಠವು ಧಾರ್ಮಿಕ ಕಾರ್ಯಗಳ ಜತೆಗೆ ಪರಿಸರ ರಕ್ಷಣೆ , ಗೋ ರಕ್ಷಣೆ ಮಾಡುತ್ತಿರುವುದಲ್ಲದೆ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆರೆ ತೊಣ್ಣೂರು (ತೊಂಡನೂರು) ಗ್ರಾಮವನ್ನು ಸ್ಮಾರ್ಟ್ ವಿಲೇಜ್ ಅನ್ನಾಗಿ ಮಾಡುವ ಸಂಕಲ್ಪವನ್ನು ಶ್ರೀ ಮಠ ಮಾಡಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಹಲವು ಸೇವಾ ಕಾರ್ಯಗಳನ್ನು ಕೈಗೊಂಡಿದೆ.

ಶ್ರೀಗಳು ಕೈಗೊಂಡಿದ್ದ ಚಾತುರ್ಮಾಸ್ಯ ವ್ರತವು ಸಂಪನ್ನಗೊಂಡಿದ್ದು, ಅದರ ಅಂಗವಾಗಿ ಅವರು ಈ ಸಂಜೆಗೆ ಸಂದರ್ಶನ ನೀಡಿದರು. ಯದುಗಿರಿ ಯತಿರಾಜ ಮಠದ ಪೀಠಾಧ್ಯಕ್ಷರಾದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ಸದ್ಯದಲ್ಲಿಯೇ ಕೆರೆ ತೊಣ್ಣೂರು ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪನೆ ಮಾಡಿ ಗ್ರಾಮದ ಜನರಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವ ಯೋಜನೆ ಇದೆ.

ರಾಮಾನುಜ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು , ಬಿಸಿ ನೀರು ಕಾಯಿಸಲು ಬೀದಿ ದೀಪಗಳಿಗೂ ಸೋಲಾರ್ ವಿದ್ಯುತ್ ಒದಗಿಸ ಬೇಕೆಂಬ ಉದ್ದೇಶವಿದೆ. ಅಲ್ಲದೆ ಶಾಲಾ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ. ಜತೆಗೆ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಅಕ್ಟೋಬರ್‍ನಲ್ಲಿ ಹೃದ್ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು.

ಈಗಾಗಲೇ ಕೆರೆ ತೊಣ್ಣೂರಿನ ಗ್ರಾಮದ ಜನರಿಗೆ ಚಿಕಿತ್ಸಾ ಕಿಟ್ ಅನ್ನು ನೀಡಿದ್ದು, ಜನರೇ ರಕ್ತದೊತ್ತಡ , ಜ್ವರದ ಪರೀಕ್ಷೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದರು.  ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್ ಅವರು 10 ಸಾವಿರ ಪುಸ್ತಕಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಕೆರೆ ಕೊಳಗಳನ್ನು ಶುದ್ಧೀಕರಿಸಲಾಗಿದೆ ಎಂದು ಹೇಳಿದರು.

Yatiraja--2

ತಾವು ಮಠದ ಪೀಠಾಧ್ಯಕ್ಷರಾದ ಮೇಲೆ ತೊಣ್ಣೂರು, ಮಾಗಡಿ, ಹೊನ್ನಾಳಿಯಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಲಾಗಿದೆ. ಈ ಗ್ರಾಮಕ್ಕೆ ಹೊಸದಾಗಿ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳ ಲಾಗಿದೆ. ಇದಕ್ಕೆ ಸಂಸದರಾಗಿದ್ದ ಸಿ.ಎಸ್. ಪುಟ್ಟರಾಜು ಅವರು ಕೂಡ ನೆರವು ನೀಡಿದ್ದಾರೆ. 10,000 ಸಾಲು ಮರಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದು ಮಠದ ಸೇವಾ ಕಾರ್ಯಗಳನ್ನು ವಿವರಿಸಿದರು.

ಕೆರೆ ತೊಣ್ಣೂರಿನ ಸುತ್ತಮುತ್ತಲ 25 ರಿಂದ 30 ಗ್ರಾಮಗಳ ಜನರಿಗೂ ಕೂಡ ವೈದ್ಯಕೀಯ ತಪಾಸಣಾ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಮಠದ ಆವರಣದಲ್ಲಿ ಗೋ ಶಾಲೆ ಯನ್ನು ನಡೆಸಲಾಗುತ್ತಿದ್ದು , ಗೋವುಗಳ ಸಗಣಿ, ಗಂಜಲವನ್ನು ಬಳಸಿ ಗೋಬರ್‍ಗ್ಯಾಸ್ ಉತ್ಪಾದಿಸ ಲಾಗುತ್ತಿದೆ.

ಉತ್ಪಾದಿತವಾದ ಗೋಬರ್ ಗ್ಯಾಸ್‍ನಿಂದ ಅಡುಗೆ ಮಾಡಲು ಬಳಸಲಾಗುತ್ತಿದೆ. ಹೀಗಾಗಿ ಮರು ಬಳಕೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಶ್ರೀ ಮಠದಲ್ಲಿ ನಿತ್ಯ ಮಧ್ಯಾಹ್ನ 1 ರಿಂದ 2 ಗಂಟೆ ಅವಧಿಯಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ. ರಾಜಾಜಿನಗರದ ಶಾಲೆಗೆ ಶ್ರೀ ಪ್ರಸಾದಂ ಟ್ರಸ್ಟ್ ಮೂಲಕ ಮಧ್ಯಾಹ್ನದ ಊಟ ಹಾಗೂ ಮಾಗಡಿ ರಸ್ತೆಯ ಅನಾಥಾಶ್ರಮಕ್ಕೆ ಊಟ, ಬಟ್ಟೆ , ಪುಸ್ತಕಗಳನ್ನು ನೀಡಲಾಗುತ್ತಿದೆ. ಅಲ್ಲದೆ ತಿಂಗಳಿಗೊಮ್ಮೆ ಮಲ್ಲೇಶ್ವರದ ಕೊಳಗೇರಿಯ ನಿವಾಸಿಗಳಿಗೆ ಶ್ರೀ ಮಠದಿಂದ ಊಟ ನೀಡಲಾಗುತ್ತಿದೆ. ಹೀಗೆ ಹಲವು ಸಮಾಜಮುಖಿ ಸೇವಾ ಕಾರ್ಯ ಗಳನ್ನು ಶ್ರೀ ಮಠದ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ಸ್ವಾಮೀಜಿಯವರು ತಿಳಿಸಿದರು.

Facebook Comments

Sri Raghav

Admin