ಅಸ್ಸಾಂನಲ್ಲಿ ವಿದ್ಯುತ್ ಸ್ಪರ್ಶಿಸಿ 6 ಬೆಸ್ತರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Six-Fishermen

ರುಪೋಹಿ(ಅಸ್ಸಾಂ), ಸೆ.21(ಪಿಟಿಐ)- ವಿದ್ಯುತ್ ಪ್ರವಹಿಸುತ್ತಿದ್ದ ಹೈವೋಲ್ಟೇಜ್ ತಂತಿಯೊಂದು ಸರೋವರಕ್ಕೆ ಸ್ಪರ್ಶಿಸಿದ ಕಾರಣ ಆರು ಬೆಸ್ತರು ಮೃತಪಟ್ಟು ಇತರ ಆರು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸಂಭವಿಸಿದೆ.

ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ಕುಪಿತರಾದ ಗ್ರಾಮಸ್ಥರು ಅಧಿಕಾರಿಯ ಮನೆಗೆ ನುಗ್ಗಿ ಕಾರು ಮತ್ತಿತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಜುರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರುಪೋಹಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 11,000 ವೋಲ್ಟ್ ವಿದ್ಯುತ್ ತಂತಿ ಮಾರ್ಗ ಸಡಿಲಗೊಂಡು ಸರೋವರದ ಮೇಲೆ ನೇತಾಡುತ್ತಾ, ನೀರನ್ನು ಸ್ಪರ್ಶಿಸುತ್ತಿತ್ತು.

ಇದನ್ನು ಗಮನಿಸಿದ ಗ್ರಾಮಸ್ಥರು ಇಂದು ಮುಂಜಾನೆ 5ರ ಸುಮಾರಿನಲ್ಲಿ ವಿದ್ಯುತ್ ಇಲಾಖೆಯ ಗಮನಕ್ಕೆ ತಂದಿದ್ದರು. ಆದರೆ ಇದು ನಿಷ್ಕ್ರಿಯ ತಂತಿ. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿಲ್ಲ ಎಂದು ಸಿಬ್ಬಂದಿ ಗ್ರಾಮಸ್ಥರಿಗೆ ತಿಳಿಸಿದ್ದರು. ಅದಾದ ಒಂದು ಗಂಟೆ ನಂತರ ಮೀನುಗಾರರ ಗುಂಪೊಂದು ಸರೋವರಕ್ಕೆ ತೆರೆಳಿದಾಗ ನೀರನ್ನು ಸ್ಪರ್ಶಿಸುತ್ತಿದ್ದ ಸಕ್ರಿಯ ವಿದ್ಯುತ್ ತಂತಿಯಿಂದ ಆರು ಬೆಸ್ತರು ಮೃತಪಟ್ಟರು.

ತೀವ್ರ ಗಾಯಗೊಂಡ ಇತರ ಆರು ಜನರನ್ನು ನಾಗಾಂವ್ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಹೇಳಿದ್ಧಾರೆ. ದೋಷಪೂರಿತ ಅಪಾಯಕಾರಿ ವಿದ್ಯುತ್ ತಂತಿ ಬಗ್ಗೆ ಮುನ್ನವೇ ಮಾಹಿತಿ ನೀಡಿದ್ದರೂ ಇಲಾಖೆಯ ನಿರ್ಲಕ್ಷ್ಯದಿಂದ ಕುಪಿತರಾದ ಗ್ರಾಮಸ್ಥರು ದೊಣ್ಣೆ, ಕಲ್ಲುಗಳೊಂದಿಗೆ ವಿದ್ಯುತ್ ಇಲಾಖೆಯ ಸ್ಥಳೀಯ ಅಧಿಕಾರಿಯ ಮನೆಗೆ ನುಗ್ಗಿ ಕಾರು ಮತ್ತಿತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ಪಡೆದ ಅಸ್ಸಾಂ ಮುಖ್ಯಮಂತ್ರಿ ಸರ್ಬನಂದಾ ಸೊನೊವಾಲ್ ರಾಜ್ಯ ಇಂಧನ ಸಚಿವ ಕೇಸಾಬ್ ಗೊಗೈ ಅವರಿಗೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಗೊಂಡಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin