ಪೊಲೀಸ್ ಠಾಣೆ ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು ಪ್ರಕರಣ ಕುರಿತು ಸಿಐಡಿ ತನಿಖೆಗೆ

ಈ ಸುದ್ದಿಯನ್ನು ಶೇರ್ ಮಾಡಿ

CID-01

ಬೆಂಗಳೂರು, ಸೆ.21-ಕಳ್ಳತನ ಪ್ರಕರಣದ ವಿಚಾರಣೆಗೆ ಕರೆತಂದಿದ್ದ ಆರೋಪಿ ಸಾವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸಲಿದ್ದಾರೆ.ಇಂದು ಅಥವಾ ನಾಳೆ ಬೆಳಗ್ಗೆ ಸಿಐಡಿ ಪೊಲೀಸರು ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತನಿಖೆ ಕೈಗೊಳ್ಳಲಿದ್ದು, ತನಿಖಾ ವರದಿ ಬಂದ ನಂತರವಷ್ಟೇ ಆರೋಪಿಯ ಸಾವು ಹೇಗೆ ಸಂಭವಿಸಿದೆ ಎಂಬುದು ತಿಳಿದುಬರಲಿದೆ.

ಮನೆ ಕಳ್ಳತನ ಪ್ರಕರಣದಲ್ಲಿ ಅಮೃತಹಳ್ಳಿಠಾಣೆ ಪೊಲೀಸರು ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಸತೀಶ್ ಅಲಿಯಾಸ್ ಸ್ಕೆಚ್ ಮಂಜ (35) ಠಾಣೆಯ 2ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಪೊಲೀಸರು ಈತನನ್ನು ವಿಚಾರಣೆ ಕರೆತರುತ್ತಿದ್ದಾಗ ತಪ್ಪಿಸಿಕೊಂಡು ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ, ಇಲ್ಲವೆ ಪೊಲೀಸರ ಹೊಡೆತ ತಾಳಲಾಗದೆ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆಯೇ ಅಥವಾ ಯಾರಾದರೂ ತಳ್ಳಿದ್ದಾರೆಯೇ ಎಂಬ ಬಗ್ಗೆ ಸಿಐಡಿ ಪೊಲೀಸರ ತನಿಖೆಯಿಂದ ತಿಳಿದುಬರಲಿದೆ.

ಆರೋಪಿಯ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೂಲತಃ ರಾಮನಗರ ಜಿಲ್ಲೆ, ವೀರಸಾಗರ ನಿವಾಸಿಯಾದ ಆರೋಪಿ ಸತೀಶನ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗಿ ಬಂದಿದ್ದರೂ ಸಹ ತನ್ನ ಚಾಳಿ ಬಿಡದೆ ಮನೆಗಳ್ಳತನ ಮಾಡಿ ಬಂಧಿತನಾಗಿ, ಇದೀಗ ಕಟ್ಟಡದಿಂದ ಜಿಗಿದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

Facebook Comments

Sri Raghav

Admin