BREAKING : ಅಪಹರಿಸಿದ್ದ ಮೂವರು ಪೊಲೀಸರನ್ನು ಹತ್ಯೆ ಮಾಡಿದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ಶೋಪಿಯಾನ್, ಸೆ.21-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ನಡೆಸುತ್ತಿರುವ ದಾಳಿ, ಹಿಂಸಾಚಾರ ಮತ್ತು ಅಪಹರಣ ಪ್ರಕರಣಗಳು ಮುಂದುವರಿದಿವೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಉಗ್ರಗಾಮಿಗಳು ಮೂವರು ವಿಶೇಷ ಪೊಲೀಸ್ ಅಧಿಕಾರಿಗಳನ್ನು(ಎಸ್‍ಪಿಒ) ಅಪಹರಿಸಿ ಭೀಕರವಾಗಿ ಕೊಂದುಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಅಪಹೃತ ಪೊಲೀಸರಿಗೆ ಹಿಂಸೆ ನೀಡಿರುವ ಭಯೋತ್ಪಾದಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಬೆದರಿಸಿ ನಂತರ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪಹೃತರ ಬಿಡುಗಡೆಗಾಗಿ ಪೊಲೀಸರು ಮತ್ತು ಯೋಧರು ತೀವ್ರ ಶೋಧ ನಡೆಸುತ್ತಿದ್ದಾಗಲೇ ಮೂವರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರು ಮೂವರು ವಾರಗಳ ಹಿಂದೆ ಮೂವರು ಪೊಲೀಸರು ಹಾಗೂ ಪೊಲೀಸ್ ಸಿಬ್ಬಂದಿಯ 15 ಸಂಬಂಧಿಕರನ್ನು ಅಪಹರಿಸಿ ಬಿಡುಗಡೆ ಮಾಡಿದ್ದ ಘಟನೆ ಬೆನ್ನಲ್ಲೇ ಶೋಪಿಯಾನ್‍ನಲ್ಲಿ ಅಪಹರಣ ಕೃತ್ಯ ಮರುಕಳಿಸಿದ್ದು, ಹತ್ಯೆಯೊಂದಿಗೆ ಪರ್ಯಾವಸನಗೊಂಡಿದೆ.

ಹಿಜ್ಬುಲ್ ಮುಜಾಹಿದ್ದೀನ್ (ಎಚ್‍ಎಂ) ಕಮಾಂಡರ್ ರಿಯಾಜ್ ನೈಕು ಈ ಕೃತ್ಯಕ್ಕೆ ತಾನೇ ಕಾರಣ ಎಂದು 12 ನಿಮಿಷಗಳ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ಭಯೋತ್ಪಾದಕರ ಎಲ್ಲ ಸಂಬಂಧಿಕರನ್ನು ಬಿಡುಗಡೆಗೊಳಿಸಬೇಕೆಂದು ಆತ ಗಡುವು ನೀಡಿದ್ದ.

ಕಳೆದ ಮಂಗಳವಾರ ಎಚ್‍ಎಂ ಉಗ್ರರು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ತಮ್ಮ ಹುದ್ದೆಗಳಿಗೆ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಸಾಯಲು ಸಿದ್ಧರಾಗಿ ಎಂದು ಬೆದರಿಕೆ ಹಾಕಿದ್ದರು. ಸ್ಥಳೀಯ ಉಗ್ರಗಾಮಿ ಕಮಾಂಡರ್ ಒಬ್ಬ ಕಾಶ್ಮೀರಿ ಭಾಷೆಯಲ್ಲಿ ಈ ಎಚ್ಚರಿಕೆ ನೀಡಿದ್ದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Facebook Comments

Sri Raghav

Admin