ರಾಜ್ಯದಲ್ಲಿ ಇನ್ನೊಂದು ವಾರ ಮಳೆ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rain--01
ಬೆಂಗಳೂರು, ಸೆ.21-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರದ ಕಾಲ ರಾಜ್ಯದಲ್ಲಿ ಮಳೆ ಇದೇ ರೀತಿ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲೂ ಚದುರಿದಂತೆ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ನಿನ್ನೆ ದಾವಣಗೆರೆ, ಹಾವೇರಿ ಸೇರಿದಂತೆ ಹಲವು ಕಡೆ ಉತ್ತಮ ಮಳೆಯಾಗಿದೆ. ಹೆಚ್ಚೂ ಕಡಿಮೆ ಇದೇ ರೀತಿ ಇನ್ನೊಂದು ವಾರದ ಕಾಲ ಮಳೆ ಮುಂದುವರೆಯಲಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮದಿಂದ ರಾಜ್ಯದ ಉತ್ತರ ಕರ್ನಾಟಕ ಹಾಗೂ ಪೂರ್ವ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ತಿಳಿಸಿದರು.

# ಒಡಿಶಾ, ಆಂಧ್ರಕ್ಕೆ ಅಪ್ಪಳಿಸಿದ ಭೀಕರ ಚಂಡಮಾರುತ..!

ವೈಜಾಗ್, ಸೆ.21(ಪಿಟಿಐ)-ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ನೆಚ್ಚರಿಕೆ ನೀಡಿರುವುದರಿಂದ ಈ ಎರಡು ರಾಜ್ಯಗಳು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿವೆ.  ಮುಂದಿನ 24 ಗಂಟೆಗಳಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶ ಕರಾವಳಿ ಪ್ರದೇಶಗಳ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಬಂಗಾಳ ಕೊಲ್ಲಿಯ ಪಶ್ಚಿಮ-ಕೇಂದ್ರ ಪ್ರದೇಶದಲ್ಲಿ ಕಡಿಮೆ ಒತ್ತಡದ ವಾತಾವರಣ ಸ್ಥಿತಿಯು ಗುರುವಾರ ತೀವ್ರ ವಾಯುಭಾರ ಕುಸಿತಕ್ಕೆ ಕಾರಣವಾಗಿ ಪ್ರಬಲ ಚಂಡಮಾರುತದ ಸ್ವರೂಪ ಪಡೆದುಕೊಂಡಿದ್ದು, ಯಾವುದೇ ಘಳಿಗೆಯಲ್ಲಿ ಸಮುದ್ರ ಸುಂಟರಗಾಳಿ ಒಡಿಶಾ ಮತ್ತು ಆಂಧ್ರ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿದೆ ಎಂದು ಐಎಂಡಿ ಸೈಕ್ಲೋನ್ ಎಚ್ಚರಿಕೆ ಕೇಂದ್ರದ ಅಧಿಕಾರಿ ಶಾಸ್ತ್ರಿ ಹೇಳಿದ್ದಾರೆ.

ಆಳ ಪ್ರಬಲ ವಾಯುಭಾರ ಕುಸಿತ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಲಿದ್ದು, ಸಮುದ್ರ ಸುಂಟರಗಾಳಿಯ ಪ್ರಕೋಪ ಒಡಿಶಾ ಮತ್ತು ಆಂಧ್ರ ರಾಜ್ಯಗಳಿಗೆ ಎದುರಾಗಿದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನೈಸರ್ಗಿಕ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ದಳಗಳು ಸಜ್ಜಾಗಿವೆ.

Facebook Comments

Sri Raghav

Admin