ವಿಧಾನಸಭಾಧ್ಯಕ್ಷರ ಮೊರೆಹೋದ ಜೆಡಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

MLC-Ramesh-Babu

ಬೆಂಗಳೂರು, ಸೆ.21-ರಾಜಕೀಯ ಪ್ರಭಾವ, ಬೆದರಿಕೆ, ಒತ್ತಡ ಅಥವಾ ಹಣದ ಆಮಿಷಕ್ಕಾಗಿ ಮತ್ತು ಅಧಿಕಾರದ ಲಾಲಸೆಗಾಗಿ ತಾವು ಆಯ್ಕೆಯಾದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಯಾವುದೇ ಪ್ರಯತ್ನವನ್ನು ತಡೆಯಬೇಕೆಂದು ಜೆಡಿಎಸ್ ರಾಜ್ಯ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದೆ.  ಇ-ಮೇಲ್ ಮೂಲಕ ಸಭಾಧ್ಯಕ್ಷರಿಗೆ ಜೆಡಿಎಸ್ ವಕ್ತಾರ ರಮೇಶ್‍ಬಾಬು ಪತ್ರ ಬರೆದಿದ್ದು, ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಯಾವೊಬ್ಬ ಚುನಾಯಿತ ಶಾಸಕರು ಭಾಗಿಯಾಗಿದ್ದರೆ ಅಥವಾ ಅಕ್ರಮಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕುಮ್ಮಕ್ಕು ನೀಡುವ ರಾಜಕೀಯ ಪಕ್ಷದ ಮೇಲೆ ಹಾಗೂ ರಾಜಕೀಯ ಪಕ್ಷದ ಪದಾಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಅಕ್ರಮ ಚಟುವಟಿಕೆ ಮೂಲಕ ಸಂಸದೀಯ ವ್ಯವಸ್ಥೆಯನ್ನು ಘಾಸಿಗೊಳಿಸುತ್ತಿರುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಕೋರಲಾಗಿದೆ. ಜನತಂತ್ರದ ರಕ್ಷಣೆ, ಮೌಲ್ಯಗಳ ಪ್ರತಿಪಾದನೆ ಮತ್ತು ಸಂಸದೀಯ ವ್ಯವಸ್ಥೆಯನ್ನು ಗೌರವಿಸುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಜರೂರು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ರಾಜ್ಯ ಬಿಜೆಪಿ ಸಂವಿಧಾನದ ಆಶಯಗಳಿಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ಕಳೆದ ಒಂದು ತಿಂಗಳಿನಿಂದ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅನೈತಿಕ ಮಾರ್ಗಗಳ ಮೂಲಕ ಅಸ್ಥಿರಗೊಳಿಸಲು ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದಾಗಿ ಅನೇಕ ಸಂದರ್ಭಗಳಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪ ಹೇಳಿಕೆಗೆ ಪೂರಕವಾಗಿ ಪಕ್ಷದ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಪ್ರಮುಖರು ನಿರಂತರವಾಗಿ ಹೇಳಿಕೆಯನ್ನು ನೀಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಲಾಗಿದೆ.

ನಾಗಮಂಗಲ ಕ್ಷೇತ್ರದ ಶಾಸಕರಾದ ಸುರೇಶ್‍ಗೌಡ ಅವರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿಯು 30 ಕೋಟಿ ರೂ.ಗಳ ಆಮಿಷವೊಡ್ಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಸಕಲೇಶಪುರ ಕ್ಷೇತ್ರದ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ನಾಗಠಾಣ ಕ್ಷೇತ್ರದ ಶಾಸಕರಾದ ದೇವಾನಂದ ಚೌಹಾಣ್, ನೆಲಮಂಗಲ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಮೂರ್ತಿ ಅವರಿಗೆ ಹಣದ ಆಮಿಷವೊಡ್ಡಿ ತಮ್ಮ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಪ್ರಭಾವ ಬೀರಿರುತ್ತಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷದ ಶಾಸಕರಾದ ಅನಿಲ್ ಚಿಕ್ಕಮಾದು, ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಶಿವಳ್ಳಿ, ರಮೇಶ್ ಜಾರಕಿಹೊಳಿ, ರಹೀಮ್‍ಖಾನ್ ಮೊದಲಾದವರಿಗೆ ಹಣದ ಆಮಿಷವೊಡ್ಡುತ್ತಿರುವುದಾಗಿ ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಗಳು ಬರುತ್ತಿವೆ.

ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನಾವಳಿಗಳನ್ನು ತಾವು ಹತ್ತಿರದಿಂದ ನೋಡಿದ್ದು, ಶಾಸಕರನ್ನು ಖರೀದಿ ಮಾಡುವ ಪ್ರಯತ್ನ ಹಾಗೂ ಹಣಕ್ಕಾಗಿ ಆಯ್ಕೆಯಾದ ಸ್ಥಾನಗಳಿಗೆ ರಾಜೀನಾಮೆ ನೀಡುವ ಯಾವುದೇ ಪ್ರಯತ್ನ ಅತ್ಯಂತ ಅವಮಾನಕರವಾದ ಸಂಗತಿಯಾಗಿದೆ. ಜನರಿಂದ ಆಯ್ಕೆಯಾದ ಯಾವೊಬ್ಬ ಶಾಸಕರು ಮತದಾರರಿಗೆ ಮತ್ತು ಆ ವಿಧಾನಸಭಾ ಕ್ಷೇತ್ರಕ್ಕೆ ಉತ್ತರದಾಯಿತ್ವವನ್ನು ಹೊಂದಿರುತ್ತಾರೆ.

Facebook Comments

Sri Raghav

Admin