ಸಿಎಂ ‘ದಂಗೆ’ ಹೇಳಿಕೆ ಕುರಿತು ಕೇಂದ್ರ ವರಿಷ್ಠರಿಗೆ ವರದಿ ಸಲ್ಲಿಸಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Amit-shah--Yadiyurappa-Yadd

ಬೆಂಗಳೂರು,ಸೆ.22- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಕುರಿತಂತೆ ರಾಜ್ಯ ಬಿಜೆಪಿ ವರಿಷ್ಠರು ಕೇಂದ್ರ ನಾಯಕರಿಗೆ ವರದಿ ಸಲ್ಲಿಸಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಅವರಿಗೆ ಈ ಬಗ್ಗೆ ವರದಿ ನೀಡಿದ್ದು, ಇದನ್ನು ಕೇಂದ್ರ ನಾಯಕರಿಗೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಪಕ್ಷದ ವಿರುದ್ದ ದಂಗೆ ಹೇಳಲು ನಾನು ಕರೆ ಕೊಡಬೇಕಾಗುತ್ತದೆ ಎಂದು ಹೇಳಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಿವಾಸದ ಬಳಿ ನಡೆಸಿದ ದಾಂಧಲೆ , ನಂತರ ಉಂಟಾದ ಬೆಳವಣಿಗೆಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮುಖ್ಯಮಂತ್ರಿಗಳ ಹೇಳಿಕೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಿ ದಾಳಿ ನಡೆಸಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ಕೂಡ ರಾಜ್ಯಪಾಲರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ ಎಂದು ತಿಳಿಸಲಾಗಿದೆ. ಭಿನ್ನಮತೀಯ ಶಾಸಕರನ್ನು ನಾವು ಸೆಳೆಯುತ್ತಿದ್ದೇವೆ ಎಂದು ಸಮ್ಮಿಶ್ರ ಸರ್ಕಾರ ದೂರುತ್ತಿದ್ದು, ಇದನ್ನೇ ವಿವಾದ ಮಾಡಿಕೊಂಡು ಜನರಲ್ಲಿ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲು ಮುಖ್ಯಮಂತ್ರಿ ಸೇರಿದಂತೆ ಅನೇಕರು ಮುಂದಾಗಿದ್ದಾರೆ. ವಾಸ್ತವವಾಗಿ ನಾವು ಯಾವುದೇ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ. ಆಧಾರ ರಹಿತವಾಗಿ ಆರೋಪ ಮಾಡಲಾಗುತ್ತಿದೆ ಎಂದು ವರದಿಲ್ಲಿ ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿಗಳೇ ಸ್ವತಃ ನನ್ನ ಕೈಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಹೇಳುತ್ತಿದ್ದಾರೆ. ಒಂದು ಕಡೆ ಜನರನ್ನು ಪ್ರಚೋದಿಸುವುದು ಮತ್ತೊಂದು ಕಡೆ ಪಕ್ಷದ ವಿರುದ್ದ ಅಪಪ್ರಚಾರ ಮಾಡುವುದು ಉಭಯ ಪಕ್ಷಗಳ ಷಡ್ಯಂತರವಾಗಿದೆ. ಅನೇಕ ಶಾಸಕರೇ ಅಸಮಾಧಾನಗೊಂಡಿರುವುದಾಗಿ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಸರ್ಕಾರದಲ್ಲಿರುವ ಅಸಮಾಧಾನವನ್ನು ಸರಿಪಡಿಸುವ ಬದಲು ಉಭಯ ಪಕ್ಷದವರು ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಪ್ರತಿ ಪಕ್ಷವಾಗಿ ಬಿಜೆಪಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆ. ತಮ್ಮಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಬದಲು ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಮುಖ್ಯಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಯೇ ಕಾರಣವಾಗುತ್ತದೆ. ನಾವು ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕಡೆ ಗಮನಹರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

Facebook Comments

Sri Raghav

Admin