ದಂಗೆ ಹೇಳಿಕೆ ಕುರಿತು ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಲು ನಾನು ಸಿದ್ಧ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01
ಶೃಂಗೇರಿ, ಸೆ.22-ತಮ್ಮ ವಿರುದ್ಧ ಬಿಜೆಪಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳುವ ಸ್ಪಷ್ಟೀಕರಣವನ್ನು ನೀಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿರುವುದು ಸಂತೋಷಕರ ವಿಚಾರ. ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಬಯಸುವ ಸ್ಪಷ್ಟೀಕರಣಕ್ಕೆ ಸೂಕ್ತ ಉತ್ತರ ಕೊಡಲಾಗುವುದು ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಮೊನ್ನೆ ಮುಖ್ಯಮಂತ್ರಿಯವರು ಬಿಜೆಪಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮುಂದುವರೆಸಿದರೆ, ಜನರಿಗೆ ದಂಗೆ ಏಳಲು ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಸಿಡಿದೆದ್ದ ಬಿಜೆಪಿ ನಾಯಕರು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರಲ್ಲದೆ, ನಿನ್ನೆ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದೂರು ನೀಡಿದ್ದರು.

ಈ ವಿಚಾರದ ಬಗ್ಗೆ ಪ್ರಕ್ರಿಯಿಸಿದ ಮುಖ್ಯಮಂತ್ರಿಗಳು, ತಾವು ಮಾಡಬಾರದದ್ದೇನೂ ಮಾಡಿಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಹಿಸದ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರೀತಿಯಲ್ಲಿ ತಾವು ಬೆಂಕಿ ಇಡಲು ಹೇಳಿಲ್ಲ. ಈ ಹಿಂದೆ ಯಡಿಯೂರಪ್ಪ ಹಲವು ಬಾರಿ ಇಡೀ ರಾಜ್ಯಕ್ಕೆ ಬೆಂಕಿ ಇಡುತ್ತೇವೆ ಹೇಳಿದ್ದರಲ್ಲವೇ ಎಂದು ಪ್ರಶ್ನಿಸಿದರು.

ತಾವು ನೀಡಿದ ಹೇಳಿಕೆಯಲ್ಲಿ ದಂಗೆ ಎಂಬ ಪದವನ್ನು ಬಳಸಲಾಗಿದೆ. ದಂಗೆ ಎಂದರೆ ಪ್ರತಿಭಟನೆ ಎಂದರ್ಥ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ ಎಂದ ಮುಖ್ಯಮಂತ್ರಿ ನನ್ನ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ. ಆದರೆ ಬಿಜೆಪಿಯವರು ಮಾಡುವುದೆಲ್ಲ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಕೆಲಸ ಎಂದು ಟೀಕಿಸಿದರು.

Facebook Comments

Sri Raghav

Admin