ಪತಿಯನ್ನು ಕೊಲೆ ಮಾಡಿದ್ದ ಪತ್ನಿ-ಪ್ರಿಯಕರನ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Murde-01

ಬೆಂಗಳೂರು, ಸೆ.22- ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಈಶಾನ್ಯ ವಿಭಾಗದ ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.   ಯಲಹಂಕ ಹೋಬಳಿಯ ವೀರಸಾಗರ ಗ್ರಾಮದ ನಿವಾಸಿ ಮಮತಾ (23) ಮತ್ತು ಯಶವಂತಪುರದ ಬಿಕೆ ನಗರ ನಿವಾಸಿ ಅಪ್ಪು (24) ಬಂಧಿತರು.

ವೀರಸಾಗರ ಗ್ರಾಮದಿಂದ ರಾಮಗೊಂಡನಹಳ್ಳಿಗೆ ಹೋಗುವ ರಸ್ತೆ ಪಕ್ಕದಲ್ಲಿ ಸಗಾಯ್‍ರಾಜ್ (30) ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಕತ್ತು ಬಿಗಿದು ಕೊಲೆ ಮಾಡಿದ್ದ ಬಗ್ಗೆ ಯಲಹಂಕ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಇನ್ಸ್‍ಪೆಕ್ಟರ್ ಮಂಜುನಾಥ್, ಪಿಎಸ್‍ಐ ರಾಜಣ್ಣ, ಅಣ್ಣಯ್ಯ, ಸಿಬ್ಬಂದಿಗಳನ್ನೊಳಗೊಂಡ ತಂಡ ಹಲವು ಮಾಹಿತಿ ಕಲೆ ಹಾಕಿ ಮೃತನ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.

ಮಮತಾ ಮದುವೆಯಾಗುವ ಮುನ್ನವೇ ಒಂದು ಮಗುವಿದ್ದ ಯಶವಂತಪುರ ನಿವಾಸಿ ಅಪ್ಪು ಎಂಬುವವರನ್ನು ಪ್ರೀತಿಸುತ್ತಿದ್ದು, ಈ ವಿಚಾರ ತಿಳಿದ ಮಮತಾ ಮನೆಯವರು ಸಗಾಯ್‍ರಾಜ್ ಎಂಬುವರೊಂದಿಗೆ ಐದು ವರ್ಷದ ಹಿಂದೆ ಮದುವೆ ಮಾಡಿಸಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಈ ನಡುವೆ ಮಮತಾ ತನ್ನ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ. ಮಮತಾ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ಸೆ.18ರಂದು ಮಧ್ಯರಾತ್ರಿ ಪತಿ ಸಗಾಯ್‍ರಾಜ್‍ನಿಗೆ ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಸುತ್ತಾಡಿಸಿದ್ದಾರೆ.

ತದನಂತರ ಸಂಭ್ರಮ್ ಕಾಲೇಜು ಬಳಿ ಇರುವ ಅಂಬಾಭವಾನಿ ದೇವಸ್ಥಾನದ ಸಮೀಪ ನಿರ್ಮಾಣ ಹಂತದ ಕಟ್ಟಡದ ಬಳಿ ಮಮತಾ ತನ್ನ ದುಪ್ಪಟ್ಟದಿಂದ ಪತಿಯ ಕುತ್ತಿಗೆ ಬಿಗಿದು ನಂತರ ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ ಮೃತ ದೇಹವನ್ನು ಮನೆ ಸಮೀಪದ ರಸ್ತೆ ಪಕ್ಕ ಬಿಸಾಡಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Facebook Comments

Sri Raghav

Admin