ಭಿನ್ನಮತ ಶಮನಕ್ಕೆ ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Venugopal-Siddaramaiah

ಬೆಂಗಳೂರು, ಸೆ.23-ಕಾಂಗ್ರೆಸ್ ಶಾಸಕರ ವಲಯದಲ್ಲಿ ಉಂಟಾಗಿರುವ ಭಿನ್ನಮತವನ್ನು ಬಗೆಹರಿಸಲು ಪಕ್ಷ ಹರಸಾಹಸಪಡುತ್ತಿದೆ. ಪಕ್ಷ ತೊರೆಯಲು ಯಾವುದೇ ಶಾಸಕರು ಸದ್ಯದ ಪರಿಸ್ಥಿತಿಯಲ್ಲಿ ಮುಂದಾಗಿಲ್ಲ. ಆದರೂ ಅತೃಪ್ತಿ, ಅಸಮಾಧಾನ ಹೊಗೆಯಾಡುತ್ತಲೇ ಇದೆ. ಇದನ್ನು ಪರಿಹರಿಸಲು ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ, ಪ್ರಮುಖ ನಿಗಮಮಂಡಳಿಗಳ ಅಧ್ಯಕ್ಷರ ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಶಾಸಕರ ಅಧಿಕಾರದ ಅತೃಪ್ತಿ, ಅಸಮಾಧಾನ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಗರಕ್ಕೆ ಆಗಮಿಸಿದ್ದಾರೆ.

ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಿದರೆ ಭಿನ್ನಮತ ಬಗೆಹರಿಯಬಹುದು. ಆದರೆ ಅತೃಪ್ತರಿಂದ ಮತ್ತೊಂದು ಭಿನ್ನಮತ ತಲೆದೋರುವ ಸಾಧ್ಯತೆ ಇದೆ. ಹೀಗಾಗಿ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸುವ ಬಗ್ಗೆ ವೇಣುಗೋಪಾಲ್ ಅವರು ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಕ್ಷ ನಿಷ್ಠರು ಯಾವುದೇ ತ್ಯಾಗವನ್ನಾದರೂ ಮಾಡಿ ಪಕ್ಷವನ್ನು ಉಳಿಸಿಕೊಳ್ಳಬೇಕಾಗಿದೆ. ಅತೃಪ್ತರನ್ನು ತಣಿಸುವ ಮೂಲಕ ಭಿನ್ನಮತವನ್ನು ಬಗೆಹರಿಸಬೇಕಾಗಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಕೆಲವರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಭಿನ್ನಮತ ತಲೆದೋರಿದೆ.

ವಿಧಾನಪರಿಷತ್ ಚುನಾವಣೆ ಮೇಲೆ ಈ ಬಂಡಾಯ ಪರಿಸ್ಥಿತಿ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರ ಲಾಭವನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಭಿನ್ನಮತ ಉಲ್ಭಣವಾಗದಂತೆ ಎಚ್ಚರಿಕೆ ವಹಿಸಬೇಕು. ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಿ ಸಾಧ್ಯವಾದಷ್ಟು ಅಧಿಕಾರ ಹಂಚಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಇಂದು ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.
ಅಕ್ಟೋಬರ್ ಮೊದಲ ವಾರ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಮತ ಚಲಾಯಿಸಿದರೆ ಮೇಲ್ಮನೆಗೆ ಮೈತ್ರಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಅಡ್ಡ ಮತದಾನವಾದರ ಎಂಬ ಆತಂಕ ಮೈತ್ರಿ ಸರ್ಕಾರಕ್ಕೆ ಎದುರಾಗಿದೆ. ಹಾಗಾಗಿ ಭಿನ್ನಮತರ ಮನವೊಲಿಸಿ ಅಧಿಕಾರ ನೀಡಲು ಮುಂದಾಗಿದೆ.

ಸಂಪುಟದಲ್ಲ್ಟಿರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದು, ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದರ ಬಗ್ಗೆಯೂ ಭರದ ಚರ್ಚೆ ನಡೆದಿದೆ. ಇದೇ 25 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು, ವಿಧಾನಪರಿಷತ್ ಚುನಾವಣೆಯಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಭಿನ್ನಮತ ಶಮನಗೊಳಿಸುವ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಅಧಿಕಾರ ವಂಚಿತರು, ಸಚಿವಾಕಾಂಕ್ಷಿಗಳು, ಶಾಸಕಾಂಗ ಪಕ್ಷದ ಸಭೆಯಲ್ಲಿ ದನಿ ಎತ್ತಲಿದ್ದಾರೆ. ಯಾವ ನಿರ್ಣಯಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪೂರ್ವಭಾವಿಯಾಗಿಯೇ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ನಾಯಕರು ಸಭೆ ಸೇರಿ ಚರ್ಚಿಸಲಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಆರದಿರುವ ಹಿನ್ನೆಲೆಯಲ್ಲಿ ನಿರಂತರ ಸಭೆಗಳು ನಡೆಯುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಮತ್ತು ಒಗ್ಗಟ್ಟಾಗಿರಬೇಕು ಎಂಬ ಸಂದೇಶವನ್ನು ರವಾನಿಸಲಾಗಿದೆ.
ಜೆಡಿಎಸ್ ಪಕ್ಷ ಕೂಡ ಒಗ್ಗಟ್ಟು ಕಾಯ್ದುಕೊಳ್ಳಲು ಹಾಸನದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಕಾಂಗ್ರೆಸ್-ಜೆಡಿಎಸ್‍ನ ಯಾವುದೇ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಆದರೂ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಭಿನ್ನಮತ ಬಗೆಹರಿಸುವ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.

Facebook Comments

Sri Raghav

Admin