ಖ್ಯಾತ ನಿರ್ದೇಶಕಿ ಕಲ್ಪನಾ ಲಜ್ಮಿ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Kalpana--01

ಮುಂಬೈ, ಸೆ.23-ಖ್ಯಾತ ಚಿತ್ರ ನಿರ್ದೇಶಕಿ, ನಿರ್ಮಾಪಕಿ ಮತ್ತು ಚಿತ್ರಕಥೆಗಾರ್ತಿ ಕಲ್ಪನಾ ಲಜ್ಮಿ ಇಂದು ಮುಂಜಾನೆ ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.  ದೀರ್ಘಕಾಲದ ಮೂತ್ರಪಿಂಡ ರೋಗ ಮತ್ತು ಮೂತ್ರಾಶಯ ವೈಫಲ್ಯದಿಂದ ಅವರು ನರಳುತ್ತಿದ್ದರು. ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಅವರು ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ತೀವ್ರ ಅನಾರೋಗ್ಯದಿಂದ ಇಂದು 4.30ರ ನಸುಕಿನಲ್ಲಿ ಅವರು ಕೊನೆಯುಸಿರೆಳೆದರು ಎಂದು ಕಲ್ಪನಾ ಅವರ ಸಹೋದರ ದೇವ್ ಲಜ್ಮಿ ತಿಳಿಸಿದ್ದಾರೆ.

ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.  ಚಿತ್ರಕಥೆ, ನಿರ್ದೇಶನ, ನಿರ್ಮಾಣ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿದ್ದ ಅವರು ನೈಜ ಕಥಾವಸ್ತುಗಳ ಸಿನಿಮಾ ನಿರ್ದೇಶನದಲ್ಲಿ ಪಳಗಿದ ಕೈ. ಮಹಿಳಾ ಪ್ರಧಾನ ಸಿನಿಮಾಗಳನ್ನು ತಯಾರಿಸುತ್ತಿದ್ದ ಕಲ್ಪನಾ ಲಜ್ಮಿ, ರುಡಾಣಿ, ದಮನ್, ದರ್ಮಿಯಾನ್ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಭೂಪೆನ್ ಹಜಾರಿಕ ಅವರ ಪ್ರಾಸ್ಟಿಟ್ಯೂಟ್ ಅಂಡ್ ದಿ ಪೋಸ್ಟ್ ಮ್ಯಾನ ಕಾದಂಬರಿ ಆಧರಿತ ಚಿಂಗಾರಿ(2006) ಅವರ ನಿರ್ದೇಶನದ ಕೊನೆ ಚಿತ್ರ. ಕಲ್ಪನಾ ಲಜ್ಮಿ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೂ ಪಾತ್ರರಾಗಿದ್ದರು. ರುಡಾಲಿ ಚಿತ್ರ ನಿರ್ದೇಶನ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಎರಡೂವರೆ ದಶಕದ ಹಿಂದೆ ಶ್ಯಾಂ ಬೆನಗಲ್ ಜತೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದರು.

ಅವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಂತೆ, ನಟರಾದ ಅಮೀರ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ಅಲಿಯಾ ಭಟ್, ನೀನಾ ಗುಪ್ತಾ ಸೇರಿ ಅನೇಕರು ಆರ್ಥಿಕ ನೆರವು ನೀಡಿದ್ದರು. ಲಾಜ್ಮಿ ನಿಧನ ವಾರ್ತೆ ಬರುತ್ತಿದ್ದಂತೆ ಅವರ ಸಮೀಪವರ್ತಿಗಳು, ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

Facebook Comments

Sri Raghav

Admin