ರಾಹುಲ್ ಮತ್ತು ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ಸಂಘಟಿತ ಪಿತೂರಿ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitly--01

ನವದೆಹಲಿ, ಸೆ.23-ಭಾರತ ಮತ್ತು ಫ್ರಾನ್ಸ್ ನಡುವಣ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟರ್‍ಗಳು ಹಾಗೂ ಫ್ರೆಂಚ್ ಮಾಜಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಫ್ರಾಂಕೋಯಿಸ್ ಹೊಲ್ಯಾಂಡ್ ನೀಡಿರುವ ಹೇಳಿಕೆಗಳು ಸಂಘಟಿತ ಪಿತೂರಿ ಎಂಬ ಸಂದೇಹವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಕ್ತಪಡಿಸಿದ್ದಾರೆ.

ರಾಹುಲ್ ನಮ್ಮ ಸರ್ಕಾರದ ವಿರುದ್ಧ ವಿನಾಕಾರಣ ಮಾಡುತ್ತಿರುವ ಆರೋಪಗಳಿಗೂ ಹಾಗೂ ಹೊಲ್ಯಾಂಡ್ ನೀಡುತ್ತಿರುವ ಹೇಳಿಕೆಗಳಿಗೂ ಸಾಮ್ಯತೆ ಇದೆ. ಇವರಿಬ್ಬರೂ ಏಕಕಾಲದಲ್ಲಿ ಒಂದೇ ರೀತಿಯ ಹೇಳಿಕೆ ಮತ್ತು ಆಪಾದನೆಗಳನ್ನು ಮಾಡುತ್ತಿರುವುದನ್ನು ನೋಡಿದರೆ, ಇವರಿಬ್ಬರ ನಡುವ ಸಂಬಂಧವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇವರಿಬ್ಬರು ಉದ್ದೇಶಪೂರ್ವಕವಾಗಿಯೇ ಸೃಷ್ಟಿ ಮಾಡಿರುವ ಆರೋಪಗಳಿವು ಎಂದು ಅವರು ಹೇಳಿದ್ದಾರೆ.

ಇವರಿಬ್ಬರ ಹೇಳಿಕೆಗಳು ಮತ್ತು ಒಂದೇ ರೀತಿಯ ಆರೋಪಗಳನ್ನು ಗಮನಿಸಿದರೆ ಇದು ಸರ್ಕಾರದ ವಿರುದ್ಧ ನಡೆಸುತ್ತಿರುವ ಸಂಘಟಿತ ಪಿತೂರಿ ಎಂಬ ಅನುಮಾನ ಮೂಡುತ್ತದೆ ಎಂದು ಅವರು ಆರೋಪಿಸಿದ್ದಾರೆ. ಭಾರತ ಮತ್ತು ಫ್ರಾನ್ಸ್ ನಡುವಣ ರಫೇಲ್ ಯುದ್ಧ ವಿಮಾನ ಖರೀದಿಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ಬಗ್ಗೆಯೇ ಹೊಲ್ಯಾಂಡ್ ಅವರಿಗೆ ಗೊಂದಲ ಮತ್ತು ವೈರುಧ್ಯಗಳಿವೆ ಎಂದು ಅರುಣ್ ಜೇಟ್ಲಿ ಟೀಕಿಸಿದ್ದಾರೆ.   ವಿಮಾನಗಳ ತಯಾರಿಕಾ ಸಂಸ್ಥೆ ಡಸೌಲ್ಟ್‍ನಿಂದ ರಿಲಯನ್ಸ್‍ನನ್ನು ಸಹಭಾಗಿ ಸಂಸ್ಥೆಯನ್ನಾಗಿ ಆಯ್ಕೆ ಮಾಡಿರುವ ವಿಚಾರದಲ್ಲಿ ಭಾರತ ಅಥವಾ ಫ್ರಾನ್ಸ್ ಸರ್ಕಾರದ ಪಾತ್ರವಿಲ್ಲ ಎಂದು ಜೇಟ್ಲಿ ಪೇಸ್ ಬುಕ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಫ್ರೆಂಚ್ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ಫ್ರಾನ್ಸ್ ಸರ್ಕಾರ ಮತ್ತು ಡಸೌಲ್ಟ್ ಏವಿಯೇಷನ್ ಸಂಸ್ಥೆ ಈಗಾಗಲೇ ಸ್ಪಷ್ಟವಾಗಿ ನಿರಾಕರಿಸಿದ್ದು, ರಿಲಯನ್ಸ್ ಆಯ್ಕೆ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.  ಫ್ರಾನ್ ಮಾಜಿ ಅಧ್ಯಕ್ಷರು ಹೇಳಿಕೆ ಬೇಜಬಾಬ್ದಾರಿಯಾಗಿದೆ. ಅವರ ಮಾತುಗಳು ಗೊಂದಲ ಮತ್ತು ವ್ಯತಿರಿಕ್ತವಾಗಿವೆ. ರಿಲಯನ್ಸ್‍ನನ್ನು ಸಹಭಾಗಿ ಸಂಸ್ಥೆಯನ್ನಾಗಿ ಆಯ್ಕೆ ಮಾಡಿರುವ ವಿಚಾರದಲ್ಲಿ ಎರಡು ಸರ್ಕಾರಗಳ ಪಾತ್ರವಿಲ್ಲ. ಅಲ್ಲದೇ ರಿಲಾಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಡಸೌಲ್ಟ್ ಹೇಳಿರುವುದು ಸ್ಪಷ್ಟವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಇದೇ ವೇಳೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಆ.30ರಂದು ರಾಹುಲ್ ಗಾಂಧಿ ಮುಂದಿನ ವಾರಗಳಲ್ಲಿ ಪ್ರಮುಖ ಸುದ್ದಿಯೊಂದನ್ನು ಬಿತ್ತರ ಮಾಡಲಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಅದಾಗಿ ಕೆಲವು ವಾರಗಳ ನಂತರ ಸೆ.21ರಂದು ಫ್ರಾನ್ಸ್‍ನ ಮಾಜಿ ಅಧ್ಯಕ್ಷರು ರಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತು ಭಾರತ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಇವೆರಡೂ ವಿಷಯಗಳನ್ನು ನೋಡಿದರೆ ಸರಿಯಾದ ಸಮಯಕ್ಕೆ ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಆರೋಪವಿದು ಎಂದು ಗೊತ್ತಾಗುತ್ತದೆ ಎಂದರು.

ರಾಹುಲ್ ಗಾಂಧಿಯವರು ದ್ವೇಷ ಸಾಧಿಸುವ ಮನೋಭಾವದಲ್ಲಿದ್ದಾರೆ ಎಂದು ಗೋಚರಿಸುತ್ತದೆ. ಈ ಇಡೀ ವಿಷಯವನ್ನು ಅವರಿಗೆ ಬೇಕಾದಂತೆ ತಿರುಚಿದಲ್ಲಿ ನನಗೆ ಯಾವುದೇ ಆಶ್ಚರ್ಯವಿಲ್ಲ. ಆ.30ರಂದು ರಾಹುಲ್ ಗಾಂಧಿ, ಸ್ವಲ್ಪ ಕಾಯಿರಿ, ಪ್ಯಾರಿಸ್‍ನಲ್ಲಿ ಬಾಂಬೊಂದು ಸ್ಫೋಟವಾಗಲಿದೆ ಎಂದು ಏಕೆ ಟ್ವಿಟ್ ಮಾಡಿದರು, ಅದಕ್ಕೆ ಸರಿಯಾಗಿ ಕೆಲವು ದಿನಗಳು ಕಳೆದ ನಂತರ ಅವರ ಆರೋಪದ ಧಾಟಿಯಲ್ಲಿಯೇ ಫ್ರಾ£್ಸïನ ಮಾಜಿ ಅಧ್ಯಕ್ಷರಿಂದ ಆರೋಪ ಕೇಳಿಬಂತು ಎಂದು ಅರುಣ್ ಜೇಟ್ಲಿ ತುಲನೆ ಮಾಡಿದ್ದಾರೆ. ಹಾಗಾದರೆ ಭಾರತ ಮತ್ತು ಫ್ರಾನ್ಸ್ ನಲ್ಲಿ ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರದ ವಿರುದ್ಧ ರಹಸ್ಯವಾಗಿ ಪಿತೂರಿ ನಡೆಸುತ್ತಿದೆಯೇ ಎಂದು ಕೇಳಿದಾಗ, ಇರಬಹುದು. ಆದರೆ, ಆ.30ರಂದು ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್‍ಗೂ ಫ್ರಾನ್ಸ್ ನಲ್ಲಿ ಫ್ರಾಂಕೊಯಿಸ್ ಮಾಡಿರುವ ಆರೋಪಗಳಿಗೂ ಕಾಕತಾಳೀಯವಿದೆ ಎಂದರು.
ರಾಹುಲ್‍ಗಾಂಧಿ ಆ.30ರಂದು ಮಾಡಿದ್ದ ಟ್ವೀಟ್‍ನಲ್ಲಿ ಜಾಗತಿಕ ಭ್ರಷ್ಟಾಚಾರ, ರಫೆಲ್ ಯುದ್ಧ ವಿಮಾನ ಬಹಳ ಎತ್ತರಕ್ಕೆ, ದೂರದಲ್ಲಿ ವೇಗವಾಗಿ ಹಾರಾಡುತ್ತದೆ. ಆದರೆ ಇನ್ನು ಕೆಲವೇ ವಾರಗಳಲ್ಲಿ ದೊಡ್ಡ ಬಾಂಬ್ ಸ್ಫೋಟವಾಗುವುದರೊಂದಿಗೆ ವಿಮಾನ ಕೆಳಗೆ ಬೀಳುತ್ತದೆ, ಮೋದಿಯವರೇ ಫ್ರಾನ್ಸ್‍ನಲ್ಲಿ ದೊಡ್ಡ ಸಮಸ್ಯೆಯಿದೆ ಎಂದು ಅನಿಲ್ ಅಂಬಾನಿಯವರಿಗೆ ಹೇಳಿ ಎಂದು ಟ್ವೀಟ್ ಮಾಡಿದ್ದರು.

ಅದಾಗಿ ಕೆಲವೇ ವಾರಗಳು ಕಳೆದ ನಂತರ ಮೊನ್ನೆ ಸೆ.21ರಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್, ಫ್ರಾನ್ಸ್‍ನ ಪತ್ರಿಕೆ ಮೀಡಿಯಾಪಾರ್ಟ್‍ಗೆ ನೀಡಿದ್ದ ಸಂದರ್ಶನದಲ್ಲಿ ರಫೆಲ್ ಯುದ್ಧ ವಿಮಾನಕ್ಕೆ ಡಸ್ಸೌಲ್ಟ್ ಜತೆ ಒಪ್ಪಂದ ಮಾಡಿಕೊಳ್ಳಲು ನಿರ್ಧಾರ ಮಾಡುವ ಸ್ಥಿತಿಯಲ್ಲಿರಲಿಲ್ಲ. ರಿಲಾಯನ್ಸ್ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ಭಾರತ ಸರ್ಕಾರದ ತೀರ್ಮಾನವಾಗಿತ್ತು. ಆದರೆ, ನಂತರ ಕೆನಡಾದಲ್ಲಿ ಫ್ರಾನ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದ ಹಾಲೆಂಡ್, ರಿಲಾಯನ್ಸ್ ಜತೆ ಕೆಲಸ ಮಾಡಲು ಡಸ್ಸೌಲ್ಟ್ ಮೇಲೆ ಭಾರತ ಒತ್ತಡ ಹಾಕಿದೆಯೇ ಎಂಬ ಬಗ್ಗೆ ಅರಿವಿಲ್ಲ ಅದಕ್ಕೆ ಡಸ್ಸೌಲ್ಟ್ ಮಾತ್ರ ಉತ್ತರಿಸಬೇಕು ಎಂದು ಹೇಳಿದ್ದರು.

Facebook Comments

Sri Raghav

Admin