6 ತಿಂಗಳೊಳಗೆ ಇಡೀ ಬೆಂಗಳೂರಿಗೆ ಉಚಿತ ವೈಫೈ

ಈ ಸುದ್ದಿಯನ್ನು ಶೇರ್ ಮಾಡಿ

Free-Wifi--01

ಬೆಂಗಳೂರು, ಸೆ.23-ಆರು ತಿಂಗಳೊಳಗೆ ಇಡೀ ಬೆಂಗಳೂರಿಗೆ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಗೋವಿಂದರಾಜ ನಗರದಲ್ಲಿ ನಿರ್ಮಿಸಲಾಗಿರುವ ಪಾಲಿಕೆ ಸೌಧ, ಅಟಲ್‍ಜೀ ಕ್ರೀಡಾ ಸಂಕೀರ್ಣ, ವಾರ್ಡ್‍ನಲ್ಲಿ ಕಲ್ಪಿಸಿರುವ ಉಚಿತ ವೈ-ಫೈ ಸೇವೆ, ಜನೌಷಧಿ ಮಳಿಗೆ, ಹೈಟೆಕ್ ಪಾದಚಾರಿ ಮಾರ್ಗ, ವಿನೂತನ ಬಸ್ ನಿಲ್ದಾಣ ಹಾಗೂ ಅಶ್ವಾರೂಢ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಂಗಳೂರು ನಗರ ಹೈಟೆಕ್ ಸಿಟಿಯಾಗಿ ಬೆಳೆದಿದೆ. ದೇಶದ 130 ಕೋಟಿ ಜನಸಂಖ್ಯೆಯಲ್ಲಿ 110 ಕೋಟಿ ಜನ ಮೊಬೈಲ್ ಉಪಯೋಗಿಸುತ್ತಿದ್ದಾರೆ. 60 ಕೋಟಿ ಜನ ಇಂಟರ್‍ನೆಟ್ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ವಿಶ್ವದ ವಿದ್ಯಮಾನಗಳನ್ನು ಕೇವಲ 2 ನಿಮಿಷದಲ್ಲಿ ಪಡೆಯಬಹುದು.  ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದರು.  ಐಟಿ-ಬಿಟಿಯಲ್ಲಿ ಇಡೀ ವಿಶ್ವಕ್ಕೆ ಬೆಂಗಳೂರು ಮಾದರಿಯಾಗಿದೆ. ಗೋವಿಂದರಾಜನಗರ ವಾರ್ಡ್‍ನಲ್ಲಿ ಸದಸ್ಯ ಉಮೇಶ್‍ಶೆಟ್ಟಿ ಉಚಿತ ವೈ-ಫೈ ಕಲ್ಪಿಸಿಕೊಟ್ಟಿದ್ದಾರೆ. ಅವರಿಂದ ಮಾಹಿತಿ ಪಡೆದಿದ್ದೇನೆ. 6 ತಿಂಗಳೊಳಗೆ ಇಡೀ ಬೆಂಗಳೂರಿಗೆ ವೈ-ಫೈ ಸೇವೆ ಕಲ್ಪಿಸಲಾಗುವುದು ಎಂದರು.

WhatsApp Image 2018-09-23 at 10.44.48 AM

# ಮುಲಾಜಿಲ್ಲದೆ ಕ್ರಮ:
ನಗರದಲ್ಲಿ ಕೇಬಲ್ ಹಾವಳಿ ಮಿತಿ ಮೀರಿದೆ. ಅನಧಿಕೃತ ಕೇಬಲ್‍ಗಳನ್ನು ತೆರವು ಮಾಡುತ್ತಿದ್ದೇವೆ. ಕೇಬಲ್ ಬೇಕೆಂದರೆ ಅನುಮತಿ ಪಡೆದು ವ್ಯವಸ್ಥಿತವಾಗಿ ಅಳವಡಿಸಬೇಕು. ಅದು ಬಿಟ್ಟು ಅನಧಿಕೃತವಾಗಿ ಕೇಬಲ್ ಅಳವಡಿಸಬಾರದು. ಅನಧಿಕೃತ ಕೇಬಲ್ ತೆರವು ಮಾಡುವುದನ್ನು ತಡೆಹಿಡಿಯುವಂತೆ ಸಾಕಷ್ಟು ಒತ್ತಡ ಬರುತ್ತಿದೆ. ನಾನು ಇದಕ್ಕೆಲ್ಲ ಮಣಿಯಲ್ಲ. ಅನಧಿಕೃತ ಕೇಬಲ್‍ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಸಂಪೂರ್ಣವಾಗಿ ನಿಷೇಧಿಸಿದ್ದೇವೆ. ಹಾಗಾಗಿ ನಗರ ಸುಂದರವಾಗಿ ಕಾಣುತ್ತಿದೆ. ಆದರೂ ಅಲ್ಲಲ್ಲಿ ಅಕ್ರಮವಾಗಿ ಫ್ಲೆಕ್ಸ್, ಬ್ಯಾನರ್ ಹಾಕಲಾಗುತ್ತಿದೆ. ಇಂಥಹವರ ವಿರುದ್ಧ 400 ಕೇಸ್‍ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

# ತೆರಿಗೆ ಸಂಗ್ರಹಿಸದಿದ್ದರೆ ಕ್ರಮ:
ಕಳೆದ ಬಾರಿ ಬಿಬಿಎಂಪಿಯಲ್ಲಿ 10 ಸಾವಿರ ಕೋಟಿ ಬಜೆಟ್ ಮಂಡಣೆ ಮಾಡಿದ್ದಾರೆ. ಈ ದೊಡ್ಡ ಮಟ್ಟದ ಬಜೆಟ್‍ಗೆ ಅನುಮೋದನೆ ನೀಡುವುದು ಬೇಡ ಎಂದು ಅಧಿಕಾರಿಗಳು ಸಲಹೆ ಕೊಟ್ಟಿದ್ದರು. ಆದರೂ ಬೆಂಗಳೂರಿನ ಅಭಿವೃದ್ಧಿಗಾಗಿ ಬಜೆಟ್‍ಗೆ ಅನುಮೋದನೆ ನೀಡಲಾಗಿದೆ. ಅದಕ್ಕೆ ತಕ್ಕಂತೆ ತೆರಿಗೆ ಸಂಗ್ರಹ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಬಾಕಿ ಇರುವ 2500 ಕೋಟಿ ತೆರಿಗೆ ವಸೂಲಿ ಮಾಡಲೇಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.  ನಗರದಲ್ಲಿ ರಸ್ತೆ ಗುಂಡಿ ಬೀಳಲು ಪದೇ ಪದೇ ಮಳೆ ಆಗುವುದು ಹಾಗೂ ಬಿಟಮಿನ್ ಮಿಶ್ರಣ ವ್ಯತ್ಯಾಸ ಕಾರಣ. ಇದನ್ನು ತಪ್ಪಿಸಲು ಹಂತ ಹಂತವಾಗಿ ನಗರದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

# ಕೆಂಪೇಗೌಡರ ದೂರದೃಷ್ಟಿ ಕಾರಣ:
ಬೆಂಗಳೂರು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಕಾರಣ. ವಿಶ್ವವಿಖ್ಯಾತ ನಗರ ವಿನ್ಯಾಸಕಾರರನ್ನು ಮೀರಿಸುವಂತೆ ಬೆಂಗಳೂರನ್ನು ಕೆಂಪೇಗೌಡರು ನಿರ್ಮಿಸಿದ್ದಾರೆ. ಹಾಗಾಗಿ ಇಲ್ಲಿನ ನಿವಾಸಿಗಳು ಸದಾ ಅವರ ಸ್ಮರಣೆ ಮಾಡಬೇಕು ಎಂದು ಹೇಳಿದರು.  ಗೋವಿಂದರಾಜ ನಗರ ವಾರ್ಡ್‍ನಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳಾಗಲು ಶಾಸಕ ವಿ.ಸೋಮಣ್ಣ, ಪಾಲಿಕೆ ಸದಸ್ಯ ಉಮೇಶ್‍ಶೆಟ್ಟಿ ಅವರು ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪರಮೇಶ್ವರ್, ಸೋಮಣ್ಣ ಕಾಂಗ್ರೆಸ್‍ನಲ್ಲೇ ಇದ್ದವರು. ಅದ್ಯಾವ ಮಾಯದಲ್ಲಿ ಬಿಜೆಪಿಗೆ ಹೋದರೋ ಗೊತ್ತಿಲ್ಲ. ಇಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಿದ್ದರು ಎಂದು ಹೇಳಿದರು. ವಿ.ಸೋಮಣ್ಣ ಅವರ ಬೆಂಬಲಿಗ, ಪಾಲಿಕೆ ಸದಸ್ಯ ಉಮೇಶ್‍ಶೆಟ್ಟಿ ಅದ್ಭುತ ಕೆಲಸಗಾರ. ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಅವರು ಇತರೆ ಸದಸ್ಯರಿಗೂ ಹೇಳಿ ಕೊಡಲಿ. ಇವರ ಕೆಲಸ ನೋಡಿದರೆ ಇವರು ಕೂಡ ಮೂಲತಃ ಕಾಂಗ್ರೆಸ್‍ನಿಂದ ಬಂದಿರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು.

WhatsApp Image 2018-09-23 at 10.44.48 AM(1)

# 200 ಹಾಸಿಗೆಗಳ ಆಸ್ಪತ್ರೆಗೆ ಸಹಕಾರ ನೀಡಿ:
ಕಾರ್ಯಕ್ರಮದಲ್ಲಿ ಶಾಸಕ ವಿ.ಸೋಮಣ್ಣ ಮಾತನಾಡಿ, ಈ ಹಿಂದೆ 9 ತಿಂಗಳು ಶಾಸಕನಾಗಿದ್ದಾಗ ಪಾಲಿಕೆ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಆದರೆ ಕೆಲವರು ತೊಂದರೆ ಕೊಟ್ಟಿದ್ದರಿಂದ ಸಾಕಾರವಾಗಿರಲಿಲ್ಲ. ಈಗ ಇದನ್ನು ಉಮೇಶ್‍ಶೆಟ್ಟಿ ಅವರು ಪೂರ್ಣಗೊಳಿಸಿದ್ದಾರೆ. ಕೆಲಸ ಮಾಡುವುದರಲ್ಲಿ ಈತ ರಾಕ್ಷಸ ಇದ್ದ ಹಾಗೆ ಎಂದು ಬಣ್ಣಿಸಿದರು. ಇಡೀ ಗೋವಿಂದರಾಜನಗರ ಮಾದರಿ ಮಾಡಿದ್ದೇವೆ. ಇಲ್ಲಿ 200 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಬೇಕೆಂಬ ಮಹದಾಸೆ ಇದೆ. ಇದಕ್ಕೆ ಸಹಕಾರ ನೀಡಬೇಕು ಎಂದು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಡಿಸಿಎಂ ಪರಮೇಶ್ವರ್ ಆಸ್ಪತ್ರೆ ನಿರ್ಮಿಸಲು ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮೇಯರ್ ಸಂಪತ್‍ರಾಜ್ ಮಾತನಾಡಿ, ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ನಂತರ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ನಾವು ಏನು ಕೇಳಿದರೂ ಇಲ್ಲ ಎನ್ನುವುದಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳಾಗಲಿ ಪಕ್ಷಾತೀತವಾಗಿ ಮಾಡಿ ಎಂದು ಸಲಹೆ ನೀಡುತ್ತಾರೆ. ಹಾಗಾಗಿ ಹಲವಾರು ಅಭಿವೃದ್ಧಿ ಕೆಲಸ ಆಗಿದೆ ಎಂದು ಹೇಳಿದರು.

WhatsApp Image 2018-09-23 at 10.44.51 AM

ಪಾಲಿಕೆ ಸದಸ್ಯ ಉಮೇಶ್‍ಶೆಟ್ಟಿ ಮಾತನಾಡಿ, ಕೇಂದ್ರ ಸಚಿವ ಅನಂತ್‍ಕುಮಾರ್, ಶಾಸಕ ವಿ.ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದಕ್ಕೆ ಇವರಿಬ್ಬರ ಆಶೀರ್ವಾದವೇ ಕಾರಣ ಎಂದು ತಿಳಿಸಿದರು.  ಆದಿಚುಂಚನಗಿರಿ ಮಠದ ಶ್ರೀಸೌಮ್ಯನಾಥ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಸ್ಥಳೀಯ ಪಾಲಿಕೆ ಸದಸ್ಯರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Facebook Comments

Sri Raghav

Admin