ಮಾಜಿ ಸೈನಿಕರಿಗೆ ‘ಕೌಶಲ್ಯ ಜವಾನ್’ ಮತ್ತು ವಿಕಲಚೇತನರಿಗೆ ‘ಕೌಶಲ್ಯ ರಥ’ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Deshapande--01

ತುಮಕೂರು, ಸೆ.23-ರಾಜ್ಯದಲ್ಲಿ ಯಾರು ಕೂಡ ನಿರುದ್ಯೋಗಿಗಳಾಗಿ ಇರಬಾರದು ಎಂಬ ಉದ್ದೇಶದಿಂದ ಕೌಶಲ್ಯ ತರಬೇತಿ ಇಲಾಖೆಯಿಂದ ಮಾಜಿ ಸೈನಿಕರಿಗೆ ಕೌಶಲ್ಯ ಜವಾನ್ ಮತ್ತು ವಿಕಲಚೇತನರಿಗೆ ಕೌಶಲ್ಯ ರಥ ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.ಇಲ್ಲಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದ ನೂತನ ತರಬೇತಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಿವೃತ್ತ ಸೈನಿಕರಿಗೆ ತರಬೇತಿ ನೀಡುವ ಮೂಲಕ ಅವರಿಗೆ ಉದ್ಯೋಗ ದೊರಕಿಸಿಕೊಡಲು ಕೌಶಲ್ಯ ಜವಾನ್ ಹಾಗೂ ವಿಕಲಚೇತನರು, ಅಂಧರು ಮತ್ತಿತರ ಅಶಕ್ತರಿಗೆ ತರಬೇತಿ ನೀಡಲು ಕೌಶಲ್ಯ ರಥ ಯೋಜನೆ ಜಾರಿಗೆ ತರಲಾಗುವುದು.ವಿಚಲಚೇತನರು ಇರುವಲ್ಲಿಗೆ ಹೋಗಿ ಅವರನ್ನು ಗುರುತಿಸಿ ಅಲ್ಲಿಯೇ ಅವರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಯುವಕರಿಗೆ ಉದ್ಯೋಗ ಸೃಷ್ಟಿಸುವುದು ದೊಡ್ಡ ಸವಾಲಿನ ಕೆಲಸ. ಇಂದು ವಿಶ್ವ ಒಂದು ಹಳ್ಳಿಯಂತಾಗಿದೆ. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಮೊದಲು ಕೈಗಾರಿಕೆಗಳು ಇತರ ರಾಜ್ಯಗಳೊಂದಿಗೆ ಸ್ಪರ್ಧಿಸಬೇಕಿತ್ತು. ಆದರೆ ಇಂದು ಜಗತ್ತಿನೊಂದಿಗೆ ಸ್ಪರ್ಧಿಸಬೇಕಿದೆ. ಆದ್ದರಿಂದ ಇಲ್ಲಿ ಗುಣಮಟ್ಟದ ಕೈಗಾರಿಕೆಗಳು ಮಾತ್ರ ಉಳಿಯುತ್ತಿವೆ ಎಂದು ಹೇಳಿದರು.

ತಾವು ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಕೌಶಲ್ಯ ತರಬೇತಿ ಇಲಾಖೆಯನ್ನು ಪ್ರತ್ಯೇಕ ಇಲಾಖೆಯನ್ನಾಗಿ ಮಾಡಿದ್ದೆವು. ಡೆನ್ಮಾರ್ಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯದಲ್ಲಿ 22 ಜಿಟಿಟಿಸಿ ಕೇಂದ್ರ ತೆರೆಯಲು ನಿರ್ಧರಿಸಲಾಗಿತ್ತು, ಈಗಾಗಲೆ 9 ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಇಲ್ಲಿ ತರಬೇತಿ ಪಡೆದವರಿಗೆ ಬೃಹತ್ ಕಂಪನಿಗಳಲ್ಲಿ ಉದ್ಯೋಗ ದೊರಕುತ್ತಿವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಸುವುದು ದೊಡ್ಡ ಸವಾಲಿನ ಕೆಲಸ. ಉದ್ಯೋಗ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಯಾವ ರೀತಿಯ ಕೌಶಲ್ಯ ಬೇಕು ಎಂಬುದನ್ನು ತಿಳಿದು ಅದೇ ಮಾದರಿಯ ಕೌಶಲ್ಯ ತರಬೇತಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ರಾಜ್ಯದ 86 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇಲ್ಲಿ ಕುಡಿಯುವ ನೀರು ಮತ್ತು ಮೇಲು ಒದಗಿಸಲು ತಲಾ ಜಿಲ್ಲೆಗೆ 50 ಲಕ್ಷ ರೂ. ನೀಡಲಾಗಿದೆ. ಪ್ರತಿ ಜಿಲ್ಲಾಧಿಕಾರಿ ಬಳಿ ಇದಕ್ಕಾಗಿ 5 ಕೋಟಿ ರೂ. ಮೀಸಲಿಡಲಾಗಿದೆ. ಬರ ಪರಿಸ್ಥಿತಿ ನಿರ್ವಹಿಸಲು ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದ ಅವರು, ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದು ಹೇಳಿದರು. ಅತಿವೃಷ್ಟಿ ಮತ್ತು ಬರಪರಿಸ್ಥಿತಿಯಿಂದ ಹಾನಿಯಾದ ಬೆಳೆಯ ಸಮೀಕ್ಷೆಯಾಗಿ ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಆದಷ್ಟು ಶೀಘ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

Deshapande--02

# ಸರ್ಕಾರ ಸುಭದ್ರ
ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.  ಪ್ರಜಾಪ್ರಭುತ್ವದಲ್ಲಿ ಶಾಸಕರಿಗೆ ಆಮಿಷ ಒಡ್ಡುವುದು, ಸೆಳೆಯುವುದು ಸರಿಯಲ್ಲ. ವಿರೋಧ ಪಕ್ಷ ಸರ್ಕಾರವನ್ನು ರಚನಾತ್ಮಕ ಕಾರ್ಯಗಳನ್ನು ಮುಂದಿಟ್ಟು ಟೀಕಿಸುವುದು ಸಹಜ. ಆದರೆ ಆಡಳಿತ ಪಕ್ಷದ ಶಾಸಕರನ್ನು ಸೆಳೆಯವುದು ಒಳ್ಳೆಯ ಬೆಳವಣಿಗೆಯಲ್ಲ . ಸರ್ಕಾರ ಒಳ್ಳೆಯ ಕೆಲಸ ಮಾಡುವಾಗ ಸಹಕಾರ ನೀಡಬೇಕು ಎಂದು ಹೇಳಿದರು.

Facebook Comments

Sri Raghav

Admin