ಬ್ಲ್ಯಾಕ್‍ಮೇಲ್ ತಂತ್ರಗಳಿಗೆ ಬಗ್ಗಲ್ಲ : ಅತೃಪ್ತರಿಗೆ ವೇಣು ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Venugopal--01
ಬೆಂಗಳೂರು, ಸೆ.23-ಯಾವುದೇ ಕಾರಣಕ್ಕೂ ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಹಿಸಲು ಸಾಧ್ಯವಿಲ್ಲ. ಬ್ಲ್ಯಾಕ್‍ಮೇಲ್ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಪಕ್ಷದ ಉಸ್ತುವಾರಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಸಿದ್ಧತೆ ಸಂಬಂಧ ಸಭೆಗಳನ್ನು ನಡೆಸಲು ರಾಜ್ಯಕ್ಕೆ ಆಗಮಿಸಿರುವ ಅವರು, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿದ್ದುಕೊಂಡೇ ಬ್ಲ್ಯಾಕ್‍ಮೇಲ್ ತಂತ್ರಗಳನ್ನು ಅನುಸರಿಸುವುದನ್ನು ಮಾಡಿದರೆ ಸಹಿಸುವುದಿಲ್ಲ. ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ರೀತಿ ರಿವಾಜುಗಳಿವೆ. ಅದರಂತೆ ಎಲ್ಲರೂ ನಡೆಯಬೇಕು. ಅದನ್ನು ಬಿಟ್ಟು ನಡೆದರೆ ಸಹಿಸುವುದಿಲ್ಲ ಎಂದು ಹೇಳಿದರು. ಬಿಜೆಪಿಯವರು ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಯಡಿಯೂರಪ್ಪ ಹಣದ ಆಮಿಷವೊಡ್ಡಿದ್ದಾರೆ. ಬಿಜೆಪಿಯವರ ಕೆಟ್ಟ ರಾಜಕಾರಣವನ್ನು ಕರ್ನಾಟಕದ ಜನತೆ ಸಹಿಸುವುದಿಲ್ಲ. ಯಾವೊಬ್ಬ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.

# ಭಿನ್ನಮತ ಶಮನಕ್ಕೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ
ಕಾಂಗ್ರೆಸ್ ಶಾಸಕರ ವಲಯದಲ್ಲಿ ಉಂಟಾಗಿರುವ ಭಿನ್ನಮತವನ್ನು ಬಗೆಹರಿಸಲು ಪಕ್ಷ ಹರಸಾಹಸಪಡುತ್ತಿದೆ. ಪಕ್ಷ ತೊರೆಯಲು ಯಾವುದೇ ಶಾಸಕರು ಸದ್ಯದ ಪರಿಸ್ಥಿತಿಯಲ್ಲಿ ಮುಂದಾಗಿಲ್ಲ. ಆದರೂ ಅತೃಪ್ತಿ, ಅಸಮಾಧಾನ ಹೊಗೆಯಾಡುತ್ತಲೇ ಇದೆ. ಇದನ್ನು ಪರಿಹರಿಸಲು ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ, ಪ್ರಮುಖ ನಿಗಮಮಂಡಳಿಗಳ ಅಧ್ಯಕ್ಷರ ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಶಾಸಕರ ಅಧಿಕಾರದ ಅತೃಪ್ತಿ, ಅಸಮಾಧಾನ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಗರಕ್ಕೆ ಆಗಮಿಸಿದ್ದಾರೆ.

ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಿದರೆ ಭಿನ್ನಮತ ಬಗೆಹರಿಯಬಹುದು. ಆದರೆ ಅತೃಪ್ತರಿಂದ ಮತ್ತೊಂದು ಭಿನ್ನಮತ ತಲೆದೋರುವ ಸಾಧ್ಯತೆ ಇದೆ. ಹೀಗಾಗಿ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸುವ ಬಗ್ಗೆ ವೇಣುಗೋಪಾಲ್ ಅವರು ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಕ್ಷ ನಿಷ್ಠರು ಯಾವುದೇ ತ್ಯಾಗವನ್ನಾದರೂ ಮಾಡಿ ಪಕ್ಷವನ್ನು ಉಳಿಸಿಕೊಳ್ಳಬೇಕಾಗಿದೆ. ಅತೃಪ್ತರನ್ನು ತಣಿಸುವ ಮೂಲಕ ಭಿನ್ನಮತವನ್ನು ಬಗೆಹರಿಸಬೇಕಾಗಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಕೆಲವರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಭಿನ್ನಮತ ತಲೆದೋರಿದೆ.

ವಿಧಾನಪರಿಷತ್ ಚುನಾವಣೆ ಮೇಲೆ ಈ ಬಂಡಾಯ ಪರಿಸ್ಥಿತಿ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರ ಲಾಭವನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಭಿನ್ನಮತ ಉಲ್ಭಣವಾಗದಂತೆ ಎಚ್ಚರಿಕೆ ವಹಿಸಬೇಕು. ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಿ ಸಾಧ್ಯವಾದಷ್ಟು ಅಧಿಕಾರ ಹಂಚಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಇಂದು ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.

Facebook Comments

Sri Raghav

Admin