ದಾಬಸ್‍ಪೇಟೆಯಲ್ಲಿ ಕಾಸಿಯಾ ಉತ್ಕೃಷ್ಟತೆ-ಅನ್ವೇಷಣೆ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಸೆ.24-ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ದಾಬಸ್‍ಪೇಟೆಯಲ್ಲಿ ಕಾಸಿಯಾ ಉತ್ಕøಷ್ಟತೆ ಮತ್ತು ಅನ್ವೇಷಣೆ ಕೇಂದ್ರ ಸ್ಥಾಪನೆಯ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಲಾಗುವುದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಬಸವರಾಜ್ ಎಸ್. ಜವಳಿ ತಿಳಿಸಿದ್ದಾರೆ.  ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಕಾಸಿಯಾದ ಭವಿಷ್ಯದ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ತಂತ್ರಜ್ಞಾನ ಮೇಲ್ದರ್ಜೆಗಾಗಿ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಗತ್ಯ ಸ್ಪರ್ಧಾತ್ಮಕ ಅವಕಾಶ ಹೊಂದಲು ಸೂಕ್ಷ್ಮ, ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಈ ಕೇಂದ್ರ ಹೊಂದಿದೆ. ಹಾಗೆಯೇ, ಒಂದೇ ಸೂರಿನಡಿ ಮಾರುಕಟ್ಟೆ, ಕೌಶಲ್ಯ ಅಭಿವೃದ್ದಿ ಹಾಗೂ ಪ್ರದರ್ಶನ ಸೌಲಭ್ಯಗಳನ್ನು ಸಹ ಪೂರೈಸಲಿದೆ. ಇದು ನಿರ್ದಿಷ್ಟವಾಗಿ ಕಾಸಿಯಾ ಸದಸ್ಯರಿಗೆ ಹಾಗೂ ಸಾಮಾನ್ಯವಾಗಿ ಎಂಎಸ್‍ಎಂಇಗಳಿಗೆ ತುಂಬಾ ಪ್ರಯೋಜನವಾಗಲಿದೆ ಹಾಗೂ ಬಹು ಆಯಾಮದ ಸಂಪನ್ಮೂಲ ಸೌಲಭ್ಯಕ್ಕೆ ಸಹಕಾರಿಯಾಗಲಿದೆ. ಉದ್ದಿಮೆ ಅಭಿವೃದ್ದಿ ಕೇಂದ್ರ, ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ, ಸಾಮಾನ್ಯ ಉಪಕರಣಗಾರ, ಮಾರುಕಟ್ಟೆ ಕೇಂದ್ರ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ಹಸಿರು ಉಪಕ್ರಮಗಳು ಮತ್ತಿತರ ಘಟಕಗಳನ್ನು ಈ ಕೇಂದ್ರ ಹೊಂದಲಿದೆ ಎಂದು ಜವಳಿ ವಿವರಿಸಿದರು.

ವ್ಯಾಪಾರ ಅಭವೃದ್ಧಿ ಸಮಾವೇಶ:
ಕಾಸಿಯಾ ಬೆಂಗಳೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡರ ಬೃಹತ್ ಕೈಗಾರಿಕೆಗಳನ್ನು ಒಳಗೊಂಡಂತೆ ಈ ವರ್ಷ ವ್ಯಾಪಾರ ಅಭಿವೃದ್ದಿ ಸಮಾವೇಶಗಳನ್ನು ವೆಂಡರ್ ಡೆವಲಪ್‍ಮೆಂಟ್ ಮೀಟ್ಸ್) ಸಹ ಆಯೋಜಿಸಲಿದೆ ಎಂದು ಬಸವರಾಜ್ ಜವಳಿ ತಿಳಿಸಿದರು. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿದರು. ದೇಶದ ಬೆಳವಣಿಗೆಗೆ ಪೂರಕವಾಗಿರುವ ಇವುಗಳ ಪುನಃಶ್ಚೇತನ ಮತ್ತು ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ತಂತ್ರಜ್ಞಾನ ಉನ್ನತೀಕರಣ, ಆಧುನಿಕ ಮಾರುಕಟ್ಟೆ ಸೌಲಭ್ಯ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ, ಜಿಎಸ್‍ಟಿ ವ್ಯವಸ್ಥೆಯಲ್ಲಿ ಮಾರ್ಪಾಡು ಮೊದಲಾದ ಸುಧಾರಣೆ ಗಳಿಗೆ ಅವರು ಸಲಹೆ ಮಾಡಿದರು.

Facebook Comments

Sri Raghav

Admin