ಪರಿಷತ್‍ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಕಾಂಗ್ರೆಸ್‍ನಲ್ಲಿ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Congress

ಬೆಂಗಳೂರು, ಸೆ.24 – ವಿಧಾನಸಭೆಯಿಂದ ವಿಧಾನ ಪರಿಷತ್‍ನ ಮೂರು ಸ್ಥಾನಗಳಿಗೆ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಕಾಂಗ್ರೆಸ್‍ನೊಳಗೆ ವ್ಯಾಪಕ ಅಸಮಾಧಾನ ಉಂಟಾಗಿದೆ.  ಕಾಂಗ್ರೆಸ್ ಪಕ್ಷದಿಂದ ಎಂ.ಸಿ. ವೇಣುಗೋಪಾಲ್ ಮತ್ತು ನಜೀರ್ ಅಹ್ಮದ್ ಅವರು ತಮ್ಮ ಉಮೇದುವಾರಿಕೆಯನ್ನು ಈಗಾಗಲೇ ಸಲ್ಲಿಸಿದ್ದಾರೆ. ಆದರೆ ಇಬ್ಬರು ಆಭ್ಯರ್ಥಿಗಳು ಈಗಾಗಲೇ ಪಕ್ಷ ಮತ್ತು ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದು, ಇತರರಿಗೆ ಅವಕಾಶ ನೀಡಬೇಕಿತ್ತು ಎಂಬ ಮಾತುಗಳು ಪಕ್ಷದೊಳಗಿನಿಂದಲೇ ಕೇಳಿಬರುತ್ತಿವೆ.

ಎಂ.ಸಿ.ವೇಣುಗೋಪಾಲ್ ಅವರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತರು. ಅವರು 2008ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಅವರಿಗೆ ಕಾಂಗ್ರೆಸ್‍ನಿಂದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ನಿಗಮ ಮಂಡಳಿಯಲ್ಲಿಯೂ ಅವರಿಗೆ ಅವಕಾಶ ದೊರೆತಿತ್ತು. ಹಿಂದಿನಿಂದಲೂ ಅವರು ಒಂದಿಲ್ಲೊಂದು ಅಧಿಕಾರ ಮತ್ತು ಅವಕಾಶವನ್ನು ಪಡೆಯುತ್ತಲೇ ಇದ್ದಾರೆ. ಈಗ ಮತ್ತೊಮ್ಮೆ ಪರಿಷತ್ ಚುನಾವಣೆಗೆ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್‍ನ ಹಲವು ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಅಭ್ಯರ್ಥಿ ನಜೀರ್ ಅಹ್ಮದ್ ಈಗಾಗಲೇ ಒಂದು ಬಾರಿ ಪರಿಷತ್ ಸದಸ್ಯರಾಗಿದ್ದವರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಮೂಲಕ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ. ಹೀಗೆ ಇಬ್ಬರು ಅಭ್ಯರ್ಥಿಗಳು ಹಲವು ಹುದ್ದೆಗಳನ್ನು ಅನುಭವಿಸಿದ್ದು, ಇಂತಹವರಿಗೆ ಮತ್ತೆ ಅವಕಾಶ ನೀಡಿರುವುದಕ್ಕೆ ಪಕ್ಷದ ಕೆಲವು ಮುಖಂಡರು ತಗಾದೆ ತೆಗೆದಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಜಿ.ಪರಮೇಶ್ವರ್, ಕೆ.ಎಸ್. ಈಶ್ವರಪ್ಪ, ವಿ.ಸೋಮಣ್ಣ ಅವರು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಮೂರು ಸ್ಥಾನಗಳು ಖಾಲಿಯಾಗಿವೆ. ಈ ಮೂವರೂ ಲಿಂಗಾಯತ, ದಲಿತ ಮತ್ತು ಕುರುಬ ಜನಾಂಗದವರಾಗಿದ್ದರು. ಈಗ ಈ ಸ್ಥಾನಗಳಿಗೆ ವಿಧಾನಸಭೆಯಿಂದ ಚುನಾವಣೆ ನಡೆಯುತ್ತಿದೆ.

ಖಾಲಿಯಾದ ಮೂರು ಸ್ಥಾನಗಳನ್ನು ಜಾತಿಯ ಆಧಾರದಲ್ಲಿ ತುಂಬಲು ನಿರ್ಧರಿಸಲಾಗಿತ್ತು. ಲಿಂಗಾಯತ ಸ್ಥಾನಕ್ಕೆ ರಾಣಿಸತೀಶ್ ಸೇರಿದಂತೆ ಹಲವು ಮುಖಂಡರ ಹೆಸರು ಚಲಾವಣೆಗೆ ಬಂದಿತ್ತು. ಆದರೆ ಲಿಂಗಾಯತ ಅಭ್ಯರ್ಥಿಗೆ ಅವಕಾಶವನ್ನೇ ನೀಡಿಲ್ಲ. ಇದು ಕೂಡ ಕಾಂಗ್ರೆಸ್‍ನಲ್ಲಿರುವ ಲಿಂಗಾಯತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಕುರುಬ ಸ್ಥಾನ ತುಂಬಲು ಮಾಜಿ ಮೇಯರ್ ರಾಮಚಂದ್ರಪ್ಪ, ಮಳವಳ್ಳಿ ಶಿವಣ್ಣ ಅವರ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆಯೂ ನಡೆದಿತ್ತು. ಆದರೆ ಇದೀಗ ಕುರುಬ ಜನಾಂಗಕ್ಕೂ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಿಲ್ಲ. ಇನ್ನು ದಲಿತರನ್ನು ಪರಿಗಣಿಸಿಯೇ ಇಲ್ಲ ಎಂಬ ಅಸಮಾಧಾನ ಪಕ್ಷದ ವಲಯದಲ್ಲಿ ಉಂಟಾಗಿದೆ. ಸ್ವತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ವೇಣುಗೋಪಾಲ್ ಆಯ್ಕೆಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪರಿಷತ್ ಸದಸ್ಯ ಆಯ್ಕೆ ಸಂಬಂಧ ಪರಮೇಶ್ವರ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದರೂ ಪರಮೇಶ್ವರ್ ಅವರ ಕೈ ಮೇಲಾಗಿದೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin