ಬೆಂಗಳೂರಿಗರನ್ನು ಕಾಡಿದ ರಾತ್ರಿಯಿಡೀ ಸುರಿದ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Rain--02

# ಅಪಾರ್ಟ್‍ಮೆಂಟ್‍ಗಳಿಗೆ ನುಗ್ಗಿದ ನೀರು..
ರಾತ್ರಿ ಆರಂಭವಾದ ಮಳೆ ಬೆಳಗ್ಗೆವರೆಗೂ ಸುರಿದ ಪರಿಣಾಮ ನಗರದ ಬಹುತೇಕ ರಸ್ತೆಗಳು ಕೆರೆಗಳಂತಾಗಿ ಪರಿಣಮಿಸಿದ್ದು , ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಜೆಪಿ ನಗರದ ಸೌಪರ್ಣಿಕಾ ಮತ್ತು ವೆಗಾ ಸಿಟಿ ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಮನೆಯಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎರಡೂ ಅಪಾರ್ಟ್‍ಮೆಂಟ್‍ಗಳಿಗೆ ನುಗ್ಗಿದ ನೀರನ್ನು ಹೊರ ಹಾಕುವ ಉದ್ದೇಶದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಇಡೀ ದಕ್ಷಿಣ ವಿಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿರುವ ದಾರಾನಿ ಕಂಫಟ್ರ್ಸ್ ಅಪಾರ್ಟ್‍ಮೆಂಟ್‍ಗೂ ಕೂಡ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಕೂಡ ಪರದಾಡುವಂತಾಗಿತ್ತು.

WhatsApp Image 2018-09-24 at 12.17.10 PM

# ಮೆಟ್ರೋ ಕಾಮಗಾರಿಗೂ ಮಳೆ ಕಾಟ…
ಸಿಲಿಕಾನ್‍ಸಿಟಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಅಬ್ಬರಿಸಿ ಸುರಿದ ವರುಣನಿಂದ ಮೆಟ್ರೋ ಕಾಮಗಾರಿಗೂ ಅಡಚಣೆ ಉಂಟಾಗಿತ್ತು. ಜಯನಗರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಯಂತ್ರಗಳನ್ನು ಹೊರ ತೆಗೆಯಲು ಮೆಟ್ರೋ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿತ್ತು.  ಮೆಟ್ರೋ ಕಾಮಗಾರಿಯ ಸುತ್ತಲು ಹಾಕಿರುವ ತಡೆಗೋಡೆಯಿಂದಾಗಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಂತಿದ್ದರಿಂದ ಆ ನೀರನ್ನು ಹೊರ ಹಾಕಲು ಸಿಬ್ಬಂದಿಗಳು ಪರದಾಡುತ್ತಿದ್ದ ದೃಶ್ಯಗಳು ಸರ್ವೇಸಾಮಾನ್ಯವಾಗಿ ಕಂಡು ಬಂದವು. ಕೆಲವು ಯಂತ್ರಗಳು ಮಳೆಯಲ್ಲಿ ನೆಂದು ತೊಯ್ದು ಹೋಗಿದ್ದರಿಂದ ಬೆಳಗ್ಗೆ ಚಾಲೂ ಸಹ ಆಗಲಿಲ್ಲ, ಮಧ್ಯಾಹ್ನದವರೆಗೂ ಸಿಬ್ಬಂದಿಗಳು ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.

WhatsApp Image 2018-09-24 at 12.17.05 PM

# ಭೂ ಕುಸಿತ
ನಾಗರಭಾವಿ ಸಮೀಪದ ವಿದ್ಯಾಗಿರಿ ಬಡಾವಣೆಯಲ್ಲಿ ಮಳೆಯಿಂದ ಭೂ ಕುಸಿತ ಉಂಟಾಗಿದೆ. ಭೂಮಿ ಕುಸಿದಿರುವ ಪ್ರದೇಶ ಸಮೀಪದಲ್ಲೇ ಜನ ವಸತಿ ಪ್ರದೇಶವಿದ್ದು , ಜನರು ಆತಂಕಕ್ಕೊಳಗಾಗಿದ್ದಾರೆ.

# ಟ್ರಾಫಿಕ್ ಜಾಮ್
ಮಳೆಯಿಂದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಬೆಳಗ್ಗೆ 9 ಗಂಟೆಯ ನಂತರ ಮಳೆರಾಯ ಮಂಕಾದ ಹಿನ್ನೆಲೆಯಲ್ಲಿ ಏಕಾಏಕಿ ವಾಹನಗಳು ರಸ್ತೆಗಿಳಿದ ಪರಿಣಾಮ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಶಾಲೆಗೆ ತೆರಳುವ ಮಕ್ಕಳು, ಕೆಲಸ ಕಾರ್ಯಗಳಿಗೆ ತೆರಳುವ ಉದ್ಯೋಗಿಗಳು ಟ್ರಾಫಿಕ್ ಜಾಮ್ ಬಿಸಿ ಅನುಭವಿಸುವಂತಾಯಿತು.

Facebook Comments

Sri Raghav

Admin