ಬಿಬಿಎಂಪಿ ಅಧಿಕಾರಿಗಳಿಗೆ ವರದಾನವಾದ ರಾತ್ರಿಯಿಡೀ ಸುರಿದ ಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Rain--05
ಬೆಂಗಳೂರು, ಸೆ.24- ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಬಿಟ್ಟು ಬಿಡದೆ ಸುರಿದ ಭಾರೀ ಮಳೆಯಿಂದಾಗಿ ಬಿಬಿಎಂಪಿಯವರು ಕೈಗೆತ್ತಿಕೊಂಡಿದ್ದ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಹೊಳೆ ನೀರಿನಲ್ಲಿ ಹುಣಸೆಹಣ್ಣು ಹಿಂಡಿದಂತಾಗಿದೆ. ಸೋಮವಾರದೊಳಗೆ ನಗರದಲ್ಲಿರುವ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿ ವರದಿ ನೀಡುವಂತೆ ಹೈಕೋರ್ಟ್ ಎಚ್ಚರಿಕೆ ನೀಡಿದ ನಂತರ ಬಿಬಿಎಂಪಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ತ್ವರಿತಗೊಳಿಸಿತ್ತು.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಅನ್ನೋ ಹಾಗೆ ಬಿಬಿಎಂಪಿ ಅಧಿಕಾರಿಗಳು ಕಾನೂನಿನ ಬಿಗಿ ಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬೇಕಾಬಿಟ್ಟಿಯಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಗರದಲ್ಲಿ ಮೇಲ್ನೋಟಕ್ಕೆ 1,600 ರಸ್ತೆ ಗುಂಡಿಗಳಿವೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ನಗರದ ರಸ್ತೆಗಳಲ್ಲಿ ಸುಮಾರು 25,000ಕ್ಕೂ ಹೆಚ್ಚು ರಸ್ತೆ ಗುಂಡಿಗಳಿದ್ದವು. ಸೋಮವಾರದೊಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಕೋರ್ಟ್‍ಗೆ ಮಾಹಿತಿ ನೀಡಬೇಕಾದ್ದರಿಂದ ರಜಾ ದಿನಗಳಲ್ಲೂ ಕಾಮಗಾರಿ ನಡೆಸಲಾಗುತ್ತಿದ್ದರೂ ಪೂರ್ತಿ ಗುಂಡಿ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಬೆಳಗಾಗುತ್ತಿದ್ದಂತೆ ಕೋರ್ಟ್‍ಗೆ ಮಾಹಿತಿ ನೀಡಬೇಕು. ಏನೋ ಮಾಡೋದಪ್ಪಾ.. ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದ ಅಧಿಕಾರಿಗಳಿಗೆ ರಾತ್ರಿ ಸುರಿದ ಭಾರೀ ಮಳೆ ವರದಾನವಾಗಿ ಪರಿಣಮಿಸಿದೆ.

ಸುಮಾರು ರಾತ್ರಿ 10 ಗಂಟೆಗೆ ಶುರುವಾದ ಮಳೆ ರಾತ್ರಿಯಿಡೀ ಧೋ ಎಂದು ಸುರಿದಿದ್ದೇ ಅಲ್ಲದೆ ಬೆಳಗ್ಗೆ 8 ಗಂಟೆವರೆಗೂ ತನ್ನ ಆರ್ಭಟ ಮುಂದುವರೆಸಿತ್ತು. ಮಳೆಯ ಈ ಆರ್ಭಟಕ್ಕೆ ಬಿಬಿಎಂಪಿ ಅಧಿಕಾರಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಮುಚ್ಚಿದ್ದ ರಸ್ತೆ ಗುಂಡಿಗಳೆಲ್ಲಾ ಮತ್ತೆ ಬಾಯ್ಬಿಟ್ಟುಕೊಂಡಿವೆ.  ಮಳೆಯಿಂದಾಗಿ ಮುಚ್ಚಿದ್ದ ಗುಂಡಿಗಳೆಲ್ಲಾ ಬಾಯ್ಬಿಟ್ಟಿವೆ ಎಂದು ಕೋರ್ಟ್‍ಗೆ ಮಾಹಿತಿ ನೀಡಿ ಬಚಾವಾಗಬಹುದು ಎಂದು ಅಧಿಕಾರಿಗಳು ನಿಟ್ಟುಸಿರು ಬಿಡುತ್ತಿದ್ದಾರೆ.

# ಅವಾಂತರ:
ರಾತ್ರಿ ಆರಂಭವಾದ ಮಳೆ ಬೆಳಗ್ಗೆವರೆಗೂ ಸುರಿದ ಪರಿಣಾಮ ನಗರದ ಬಹುತೇಕ ರಸ್ತೆಗಳು ಕೆರೆಗಳಂತಾಗಿ ಪರಿಣಮಿಸಿದ್ದು , ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಜೆಪಿ ನಗರದ ಸೌಪರ್ಣಿಕಾ ಮತ್ತು ವೆಗಾ ಸಿಟಿ ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಮನೆಯಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎರಡೂ ಅಪಾರ್ಟ್‍ಮೆಂಟ್‍ಗಳಿಗೆ ನುಗ್ಗಿದ ನೀರನ್ನು ಹೊರ ಹಾಕುವ ಉದ್ದೇಶದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಇಡೀ ದಕ್ಷಿಣ ವಿಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.

# ಭೂ ಕುಸಿತ:
ನಾಗರಭಾವಿ ಸಮೀಪದ ವಿದ್ಯಾಗಿರಿ ಬಡಾವಣೆಯಲ್ಲಿ ಮಳೆಯಿಂದ ಭೂ ಕುಸಿತ ಉಂಟಾಗಿದೆ. ಭೂಮಿ ಕುಸಿದಿರುವ ಪ್ರದೇಶ ಸಮೀಪದಲ್ಲೇ ಜನ ವಸತಿ ಪ್ರದೇಶವಿದ್ದು , ಜನರು ಆತಂಕಕ್ಕೊಳಗಾಗಿದ್ದಾರೆ.

# ಟ್ರಾಫಿಕ್ ಜಾಮ್:
ಮಳೆಯಿಂದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಬೆಳಗ್ಗೆ 9 ಗಂಟೆಯ ನಂತರ ಮಳೆರಾಯ ಮಂಕಾದ ಹಿನ್ನೆಲೆಯಲ್ಲಿ ಏಕಾಏಕಿ ವಾಹನಗಳು ರಸ್ತೆಗಿಳಿದ ಪರಿಣಾಮ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಾಲೆಗೆ ತೆರಳುವ ಮಕ್ಕಳು, ಕೆಲಸ ಕಾರ್ಯಗಳಿಗೆ ತೆರಳುವ ಉದ್ಯೋಗಿಗಳು ಟ್ರಾಫಿಕ್ ಜಾಮ್ ಬಿಸಿ ಅನುಭವಿಸುವಂತಾಯಿತು.

Facebook Comments

Sri Raghav

Admin