ಲೋಕಸಭೆ ಚುನಾವಣೆಯಲ್ಲೂ ಕೈ-ತೆನೆ ದೋಸ್ತಿ..?

ಈ ಸುದ್ದಿಯನ್ನು ಶೇರ್ ಮಾಡಿ

JDS---Congress

ನವದೆಹಲಿ, ಸೆ.24- ಕಾಂಗ್ರೆಸ್ ಮೈಕೊಡವಿ ಎದ್ದು ನಿಂತಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಮಹಾಮೈತ್ರಿ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ಕರ್ನಾಟಕದಲ್ಲೂ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಗಂಭೀರ ಮಾತುಕತೆ ಮಾಡಿದೆ.   ಮುಂಬರುವ ಲೋಕಸಭೆ ಮತ್ತು ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಈಗಿನಿಂದಲೇ ಸಿದ್ಧಪಡಿಸುತ್ತಿರುವ ಹೊಸ ಕಾರ್ಯತಂತ್ರಗಳನ್ನು ರೂಪಿಸಲು ಮುಂದಾಗಿದೆ.

ರಾಜಧಾನಿ ದೆಹಲಿಯ ಜಿಆರ್‍ಜಿ ರಸ್ತೆಯಲ್ಲಿರುವ ಕಾಂಗ್ರೆಸ್ ವಾರ್‍ರೂಮ್ (ಚುನಾವಣಾ ಸಿದ್ಧತೆಗಳು ಮತ್ತು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಪಕ್ಷದ ರಹಸ್ಯ ಸಭೆ)ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಸಭೆ ಸೇರಿ ಚುನಾವಣಾ ಸಿದ್ಧತೆಗಳ ಬಗ್ಗೆ ಗಹನ ಚರ್ಚೆ ನಡೆಸಿದರು. ಎಐಸಿಸಿ ಮಹಾಪ್ರಧಾನಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.  ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿ ಮತ್ತು 10 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಪಕ್ಷದ ಮುಖಂಡರು ಮಹತ್ವದ ಸಮಾಲೋಚನೆ ನಡೆಸಿದರು.

ಮಹಾಮೈತ್ರಿ ಮತ್ತು ಚುನಾವಣೆ ಹೊಂದಾಣಿಕೆಗಳ ಸಾಧಕ-ಬಾಧಕಗಳು ಮತ್ತು ಅವುಗಳಿಂದ ಪಕ್ಷಕ್ಕೆ ಆಗುವ ಪ್ರಯೋಜನ ಮತ್ತು ದೂರಗಾಮಿ ಪರಿಣಾಮಗಳ ಬಗ್ಗೆ ಈ ನಾಯಕರು ಚರ್ಚಿಸಿ ಕೆಲವು ಸಲಹೆ, ಅಭಿಪ್ರಾಯಗಳನ್ನೂ ಸಹ ವ್ಯಕ್ತಪಡಿಸಿದರು.  ಹತ್ತು ರಾಜ್ಯಗಳ ಚುನಾವಣೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಪ್ರತಿ ರಾಜ್ಯದ ಬಗ್ಗೆ ತಲಾ ಅರ್ಧಗಂಟೆ ಚರ್ಚೆ ನಿಗದಿಗೊಳಿಸಲಾಗಿತ್ತು. ಆಯಾ ರಾಜ್ಯಗಳ ಕಾಂಗ್ರೆಸ್ ಮುಖಂಡರು ಪ್ರಸ್ತುತ ಸನ್ನಿವೇಶ ಮತ್ತು ಭವಿಷ್ಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

# ಸಂಪರ್ಕ ಅಭಿಯಾನ:
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಬಲಗೊಳಿಸಿ ಸಂಘಟಿಸುವ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತಾಗಿ ವೇಣುಗೋಪಾಲ್ ಸಭೆಗೆ ಮಾಹಿತಿ ನೀಡಿದರು. ಅ.2 ರಿಂದ 19ರವರೆಗೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮನೆಯಿಂದ ಮನೆಗೆ ಸಂಪರ್ಕ ಅಭಿಯಾನ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಅವರು ತಿಳಿಸಿದರು.  ಬೂತ್ ಅಧ್ಯಕ್ಷರು ಮತ್ತು ಸ್ಥಳೀಯ ಮುಖಂಡರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಗಳ ಬಗ್ಗೆ ಪ್ರಚಾರ ಪತ್ರಗಳನ್ನು ಹಂಚಲಿದ್ದಾರೆ. ಅಲ್ಲದೆ ಚುನಾವಣೆಗಾಗಿ ನಿಧಿಸಂಗ್ರಹಿಸುವ ಕಾರ್ಯವನ್ನೂ ಸಹ ಪಕ್ಷವು ಚುರುಕುಗೊಳಿಸಲಿದೆ ಎಂದು ಅವರು ವಿವರಿಸಿದರು.

# ಜೆಡಿಎಸ್ ಜೊತೆ ಮೈತ್ರಿ:
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುವ ಸಂಬಂಧ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. 28 ಕ್ಷೇತ್ರಗಳಲ್ಲಿ 20 ಕಾಂಗ್ರೆಸ್, 8 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸುವ ಬಗ್ಗೆ ರಾಜ್ಯ ನಾಯಕರು ಚರ್ಚಿಸಿದ್ದಾರೆ. ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಮೈತ್ರಿಗೆ ಹೆಚ್ಚು ಅನುಕೂಲವಾಗುತ್ತದೆ. ಕೊಡು-ಕೊಳ್ಳುವಿಕೆಯಿಂದಾಗುವ ಲಾಭ-ನಷ್ಟಗಳೇನು ಎಂಬ ಬಗ್ಗೆಯೂ ಕೂಡ ಚರ್ಚೆ ನಡೆಯಿತು

Facebook Comments

Sri Raghav

Admin