ಹೂಡಿಕೆದಾರರಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitley
ನವದೆಹಲಿ, ಸೆ.23-ಬ್ಯಾಂಕೇತರ ಆರ್ಥಿಕ ಸಂಸ್ಥೆಗಳು (ಎನ್‍ಬಿಎಫ್‍ಸಿಗಳು) ಹಾಗೂ ಮ್ಯೂಚುವಲ್ ಫಂಡ್‍ಗಳಲ್ಲಿ ಅಪತ್ಕಾಲಕ್ಕೆ ಹಣಕಾಸು ಲಭ್ಯತೆಗಾಗಿ ಕೇಂದ್ರ ಸರ್ಕಾರ ಅಗತ್ಯವಾದ ಸಕಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ಮೂಲಕ ಎನ್‍ಬಿಎಫ್‍ಸಿಗಳು ಹಾಗೂ ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರು ಮತ್ತು ಗ್ರಾಹಕರಿಗೆ ಹಣಕಾಸು ಅಲಭ್ಯತೆ ಆತಂಕ ನಿವಾರಿಸುವ ಅಭಯ ನೀಡಿದ್ದಾರೆ.

ಕಳೆದ ಶುಕ್ರವಾರ ಷೇರು ಪೇಟೆಯಲ್ಲಿ ಹಠಾತ್ ಮತ್ತು ತೀವ್ರ ಕುಸಿತದಿಂದಾಗಿ ಕೆಲವು ಸಂಸ್ಥೆಗಳಲ್ಲಿ ಹಣಕಾಸು ಅಲಭ್ಯತೆ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕಗಳ ಹಿನ್ನೆಲೆಯಲ್ಲಿ ವಿತ್ತ ಸಚಿವರು ಈ ಹೇಳಿಕೆ ನೀಡಿ ಗ್ರಾಹಕರಿಗೆ ಧೈರ್ಯ ತುಂಬಿದ್ದಾರೆ.

ಎನ್‍ಬಿಎಫ್‍ಸಿಗಳು, ಮ್ಯೂಚುವಲ್ ಫಂಡ್‍ಗಳು ಹಾಗೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಸಾಕಷ್ಟ ಹಣಕಾಸು ಲಭ್ಯತೆ ಹೊಂದಿರಬೇಕು/ನಿರ್ವಹಣೆ ಮಾಡಬೇಕು. ಇವುಗಳನ್ನು ಸಮರ್ಪಕ ಹಣಕಾಸು ಹೊಂದಿರುವುದನ್ನು ಖಾತರಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಷೇರುಪೇಟೆ ವಹಿವಾಟು ಆರಂಭಕ್ಕೆ ಮುನ್ನ ಜೇಟ್ಲಿ ಟ್ವಿಟರ್‍ನಲ್ಲಿ ಹೇಳಿದ್ದಾರೆ.

ಹಣಕಾಸು ವಲಯದ ಬೆಳವಣಿಗೆಗಳ ಬಗ್ಗೆ ತಾನು ತೀವ್ರ ನಿಗಾ ವಹಿಸಿದ್ದು, ಗ್ರಾಹಕರು ಮತ್ತು ಹೂಡಿಕದಾರರ ಹಿತಾಸಕ್ತಿ ರಕ್ಷಣೆಗಾಗಿ ಅಗತ್ಯವಾದ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿದ್ಧ ಎಂದು ನಿನ್ನೆಯಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಹಾಗೂ ಷೇರು ಪೇಟೆ ನಿಯಂತ್ರಣ ಸಂಸ್ಥೆ ಸೆಬಿ ತಿಳಿಸಿತ್ತು.

Facebook Comments

Sri Raghav

Admin