ಮಲ್ಯ,ನೀರವ್,ಚೋಕ್ಸಿ ನಂತರ 5,000 ಕೋಟಿ ನುಂಗಿ ಮತ್ತೊಬ್ಬ ವಂಚಕ ನೈಜೀರಿಯಾಗೆ ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Nitin
ನವದೆಹಲಿ, ಸೆ.24-ಕಳಂಕಿತ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಪ್ರಕರಣವನ್ನು ಹೋಲುವ ಮತ್ತೊಂದು ಭಾರೀ ಅಕ್ರಮ-ಅವ್ಯವಹಾರ ಬೆಳಕಿಗೆ ಬಂದಿದೆ.   ಬ್ಯಾಂಕುಗಳಿಂದ 5,000 ಕೋಟಿ ರೂ.ಗಳಿಗೆ ಹೆಚ್ಚು ಸಾಲ ಪಡೆದಿರುವ ಗುಜರಾತ್ ಮೂಲದ ಸ್ಟಲಿಂಗ್ ಬಯೋಟೆಕ್ ಸಂಸ್ಥೆಯ ನಿರ್ದೇಶಕ ನಿತಿನ್ ಸಂದೇಸರ ಮತ್ತು ಆತನ ಕುಟುಂಬ ನೈಜೀರಿಯಾಕ್ಕೆ ಪರಾರಿಯಾಗಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ವಡೋದರಾ ಮೂಲದ ನಿತಿನ್ ಹಾಗೂ ಸಂಸ್ಥೆಯ ಇತರ ನಿರ್ದೇಶಕರಾದ ನಿತಿನ್ ಸಹೋದರ ಚೇತನ್ ಸಂದೇಸರ ಹಾಗೂ ಆತನ ಪತ್ನಿ ದೀಪ್ತಿಬೆನ್ ಸಂದೇಸರ ಅವರ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ(ಇಡಿ) ಇತ್ತೀಚೆಗಷ್ಟೇ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿತ್ತು.

ಈ ನಡುವೆ ನಿತಿನ್ ಮತ್ತು ಕುಟುಂಬದವರು ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದಲ್ಲಿ ಇದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅವರು ಈಗ ನೈಜೀರಿಯಾಕ್ಕೆ ಪರಾರಿಯಾಗಿದ್ದು ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರತವು ನೈಜೀರಿಯಾ ಜೊತೆ ಅಪರಾಧಿಗಳ ಹಸ್ತಾಂತರ ಒಪ್ಪಂದ ಅಥವಾ ಪರಸ್ಪರ ಕಾನೂನು ಸಹಕಾರ ನೆರವು ಒಡಂಬಂಡಿಕೆ ಮಾಡಿಕೊಂಡಿಲ್ಲ. ಹೀಗಾಗಿ ನೈಜೀರಿಯಾದಿಂದ ನಿತಿನ್ ಚೇತನ್, ದೀಪ್ತಿ ಸೇರಿದಂತೆ ಅವರ ಕುಟುಂಬವನ್ನು ಭಾರತಕ್ಕೆ ಕರೆತರುವುದು ಕಷ್ಟವಾಗಿದೆ. ಈ ಹಗರಣದಲ್ಲಿ ಆಂಧ್ರಬ್ಯಾಂಕ್ ಮಾಜಿ ನಿರ್ದೇಶಕ, ಲೆಕ್ಕಪರಿಶೋಧಕರೂ ಶಾಮೀಲಾಗಿದ್ದಾರೆ.

ಇವರು ಯುಎಇನಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ಅವರನ್ನು ಹಸ್ತಾಂತರಕ್ಕೆ ಪಡೆಯಲು ಸಿಬಿಐ ಮತ್ತು ಇಡಿ ಅಧಿಕಾರಿಗಳು ಅಲ್ಲಿನ ಉನ್ನತಾಧಿಕಾರಿಯನ್ನು ಸಂಪರ್ಕಿಸಿದ್ದರು. ಆದರೆ ಅದಕ್ಕೂ ಮೊದಲೇ ಅವರು ಅಲ್ಲಿಂದ ನೈಜೀರಿಯಾಕ್ಕೆ ಹಾಜರಿದ್ದರು.

Facebook Comments

Sri Raghav

Admin