ಕ್ರಿಮಿನಲ್ ರಾಜಕಾರಣಿಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Criminal--politiciansನವದೆಹಲಿ,ಸೆ.25-ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದರು ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ವಿಚಾರಣೆ ಮತ್ತು ಆನಂತರದ ಶಿಕ್ಷೆಗೂ ಮುನ್ನ ಸದಸ್ಯತ್ವದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್, ಸಂಸತ್ ನಿಯಮಾವಳಿ ರೂಪಿಸಬೇಕೆಂದು ಆದೇಶ ನೀಡಿದೆ.  ಇದೇ ವೇಳೆ ಚುನಾವಣೆಗೆ ಸ್ಪರ್ಧಿಸುವ ಮುನ್ನ ಪ್ರತಿಯೊಬ್ಬ ಅಭ್ಯರ್ಥಿಗಳು ಕಡ್ಡಾಯವಾಗಿ ಅಫಿಡೆವಿಟ್‍ನಲ್ಲಿ ತಾವು ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣದ ಬಗ್ಗೆ ದಪ್ಪ ಅಕ್ಷರಗಳಲ್ಲಿ ನಮೂದಿಸಬೇಕೆಂದು ಸೂಚನೆ ಕೊಟ್ಟಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನೊಳಗೊಂಡ ಐದು ಮಂದಿ ಸಾಂವಿಧಾನಿಕ ಪೀಠ ಈ ಮಹತ್ವದ ಹಾಗೂ ಒಮ್ಮತದ ತೀರ್ಪು ನೀಡಿದೆ. 1951ರ ಜನಪ್ರತಿನಿಧಿ ಕಾಯ್ದೆಯನ್ನು ಪ್ರಶ್ನಿಸಿ ಬಿಜೆಪಿಯ ಅಶ್ವಿನ್‍ಕುಮಾರ್ ಉಪಾಧ್ಯಾಯ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದ ಸುಪ್ರೀಂ ಕೋರ್ಟ್ , ಅನರ್ಹಗೊಳಿಸುವುದನ್ನು ಮಾನದಂಡ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಭ್ರಷ್ಟಾಚಾರ ಎಂಬುದು ಆರ್ಥಿಕ ಭಯೋತ್ಪಾದನೆಯಾಗಿದೆ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ಜನರೇ ಅವರ ಹಣೆಬರಹವನ್ನು ತೀರ್ಮಾನಿಸಬೇಕೆಂದು ಐವರು ನ್ಯಾಯಾಧೀಶರು ಅವಿರೋಧವಾಗಿ ಒಮ್ಮತದ ತೀರ್ಪನ್ನು ಪ್ರಕಟಿಸಿದರು.  ಸಂಸತ್ ಹಾಗೂ ಚುನಾವಣಾ ಆಯೋಗ ಈ ಸಂಬಂಧ ಕಠಿಣ ಕಾನೂನುಗಳನ್ನು ನಿಯಮಾವಳಿಗೆ ಜಾರಿ ಮಾಡಬೇಕು. ಯಾವುದೇ ವ್ಯಕ್ತಿಯ ಮೇಲೆ ಆರೋಪಗಳು ಸಾಬೀತಾಗುವವರೆಗೂ ಇಲ್ಲವೇ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ವಿಚಾರಣೆ ಮತ್ತು ಆನಂತರದ ಶಿಕ್ಷೆಗೂ ಮುನ್ನವೇ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಲು ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.   1951ರ ಜನಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರ ಆರೋಪ ಸಾಬೀತಾದರೆ ಆರು ವರ್ಷ ಜೈಲು ಶಿಕ್ಷೆ ಹಾಗೂ 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿರುವುದಿಲ್ಲ.

# ನ್ಯಾಯಾಲಯ ಹೇಳಿದ್ದೇನು:
ದೀಪಕ್ ಮಿಶ್ರ ನೇತೃತ್ವದ ಪಂಚ ಪೀಠ, ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೆ ನಾವು ಲಕ್ಷ್ಮಣ ರೇಖೆ ದಾಟಿ ತೀರ್ಪು ನೀಡಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸುವವರೆಗೂ ಮುನ್ನವೇ ತೀರ್ಪು ನೀಡುವುದು ಹೇಗೆ ಎಂದು ಅರ್ಜಿದಾರ ಅಶ್ವಿನ್‍ಕುಮಾರ್ ಉಪಾಧ್ಯಾಯ ಹಾಗೂ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರನ್ನು ಪ್ರಶ್ನೆ ಮಾಡಿತು.

ಅಭ್ಯರ್ಥಿಯೊಬ್ಬ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದರೆ ಅದು ವಿಚಾರಣೆ ಮುಗಿದು ನ್ಯಾಯಾಲಯ ಅಂತಿಮ ತೀರ್ಪು ನೀಡುವ ಮುನ್ನವೇ ಅನರ್ಹಗೊಳಿಸುವುದು ಸರಿಯಾದ ಕ್ರಮವಲ್ಲ. ಸಂಸತ್ ಕಾನೂನು ರೂಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಿದೆ ಎಂದು ಕೆ.ಕೆ.ವೇಣುಗೋಪಾಲ್ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದರು. ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಫಿಡೆವಿಟ್‍ನಲ್ಲೇ ದಪ್ಪ ಅಕ್ಷರಗಳಲ್ಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳನ್ನು ಕಡ್ಡಾಯವಾಗಿ ನಮೂದಿಸಬೇಕು.  ಎಲ್ಲ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಹೆಸರನ್ನು ಕಡ್ಡಾಯವಾಗಿ ಘೋಷಣೆ ಮಾಡಬೇಕು. ಚುನಾವಣಾ ಆಯೋಗವು ಇಂಥಿಂತಹ ಅಭ್ಯರ್ಥಿಗಳು ಇಷ್ಟು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವೆಬ್‍ಸೈಟ್‍ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.

# ಜನರೇ ತೀರ್ಮಾನಿಸಲಿ:
ಇನ್ನು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಹಣೆಬರಹವನ್ನು ನ್ಯಾಯಾಲಯ ತೀರ್ಮಾನಿಸುವ ಬದಲು ಜನರೇ ಇಂಥವರನ್ನು ಆರಿಸಬೇಕೋ, ಬಿಡಬೇಕೋ ಎಂದು ನಿರ್ಧರಿಸುವಂತಾಗಬೇಕು. ಆಗ ಮಾತ್ರ ರಾಜಕೀಯ ಸ್ವಚ್ಛತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin