ಕಾಂಗ್ರೆಸ್‍ನಲ್ಲಿ ಆರಿದ ಬಂಡಾಯದ ಬೆಂಕಿ, ಈಗ ಎಲ್ಲಾ ಕೂಲ್ ಕೂಲ್..!

ಈ ಸುದ್ದಿಯನ್ನು ಶೇರ್ ಮಾಡಿ

Congresssss

ಬೆಂಗಳೂರು,ಸೆ.25- ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲ್ಲಾಡಿಸುವಂತೆ ಮಾಡಿದ್ದ ಕಾಂಗ್ರೆಸ್‍ನ ಆಂತರಿಕ ಬಂಡಾಯ ಸಂಪೂರ್ಣ ತಣ್ಣಗಾಗಿದ್ದು, ಅತೃಪ್ತ ಶಾಸಕರು ಇಂದು ಮಾಜಿ ಮುಖ್ಯಮಂತ್ರಿ ದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚಿಸುವ ಮೂಲಕ ಬಂಡಾಯ ಶಮನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಬಂಡಾಯ ಚಟುವಟಿಕೆಗಳು ನಡೆಯುತ್ತಲೇ ಇದ್ದು, ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇದ್ದವು. ಇತ್ತೀಚಿನ ದಿನಗಳಲ್ಲಿ ಶಾಸಕರಾದ ಎಂಟಿಬಿ ನಾಗರಾಜ್, ಡಾ.ಸುಧಾಕರ್ ಮತ್ತಿತರರು ಚೆನ್ನೈ ಪ್ರವಾಸ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಹಲವಾರು ರೀತಿಯ ಕಾರ್ಯಾಚರಣೆಗಳು ನಡೆದು ಅವರನ್ನು ಸಮಾಧಾನಗೊಳಿಸಲಾಗಿತ್ತು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚೆನ್ನೈ ಪ್ರವಾಸದಲ್ಲಿದ್ದ ಇಬ್ಬರು ಶಾಸಕರಿಗೆ ದೂರವಾಣಿ ಕರೆ ಮಾಡಿ ಕಠಿಣ ಎಚ್ಚರಿಕೆ ನೀಡಿದ್ದರಿಂದಾಗಿ ಅವರು ಸದ್ದಿಲ್ಲದೆ ವಾಪಸ್ ಬಂದಿದ್ದರು. ಆದರೂ ಕೂಡ ಅವರು ಅಲ್ಲಲ್ಲಿ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇದ್ದರು.  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಮತ್ತಿತರ ಸಚಿವರು ನಡೆಸಿದ ಸಂಧಾನ ಫಲ ನೀಡಿತು.

ಇಂದು ಸಂಜೆ ಶಾಸಕಾಂಗ ಸಭೆ ನಡೆಯುವುದರಿಂದ ಅದರಲ್ಲಿ ಎಲ್ಲಾ ಶಾಸಕರು ಭಾಗವಹಿಸಬೇಕು ಎಂಬ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ತಮ್ಮ ಅಸಮಾಧಾನಗಳನ್ನು ಹೊರ ಹಾಕುವ ಬದಲಾಗಿ ಖಾಸಗಿ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತ ಎಂಬ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್, ಡಾ.ಸುಧಾಕರ್ ಹಾಗೂ ಮತ್ತಿತರ ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಈ ಮೊದಲು ಸರ್ಕಾರದ ಆರಂಭದಲ್ಲೇ ಎಂ.ಬಿ.ಪಾಟೀಲ್ ಬಳಗ ಬಂಡಾಯವೆದ್ದಿತ್ತು. ಆನಂತರ ಬೆಳಗಾವಿ ಜಾರಕಿಹೊಳಿ ಸಹೋದರರ ಬಂಡಾಯ ಒಂದಷ್ಟು ದಿನ ಚಾಲ್ತಿಯಲ್ಲಿತ್ತು. ಎಲ್ಲವೂ ತಣ್ಣಗಾಗುವ ಹಂತದಲ್ಲಿ ಎಂಟಿಬಿ ನಾಗರಾಜ್, ಸುಧಾಕರ್ ಬಂಡಾಯದ ಬಾವುಟ ಹಿಡಿದಿದ್ದರು. ಆದರೆ ಇಂದಿನ ಬೆಳೆವಣಿಗೆಯ ಮೂಲಕ ಎಲ್ಲ ರೀತಿಯ ಬಂಡಾಯಗಳು ತಣ್ಣಗಾಗಿವೆ.

Facebook Comments

Sri Raghav

Admin