ಚುನಾಯಿತ ಜನಪ್ರತಿನಿಧಿಗಳ ವಕೀಲ ವೃತ್ತಿಗೆ ಅಡ್ಡಿಯಿಲ್ಲ : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಸೆ.25-ಚುನಾಯಿತ ಜನಪ್ರತಿನಿಧಿಗಳು(ಶಾಸಕರು ಮತ್ತು ಸಂಸದರು) ವಕೀಲ ವೃತ್ತಿ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕೆಂದು ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಳ್ಳಿ ಹಾಕಿದೆ. ಇದರೊಂದಿಗೆ ಚುನಾಯಿತ ನಾಯಕರ ವಕೀಲ ವೃತ್ತಿ ಅಬಾಧಿತವಾಗಿದೆ. ಚುನಾಯಿತರಾಗಿ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು (ಎಂಪಿಗಳು, ಎಂಎಲ್‍ಎಗಳು, ಎಂಎಲ್‍ಸಿಗಳು) ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ಮುಂದುವರೆಸುವುದನ್ನು ನಿಷೇಧಿಸಬೇಕೆಂದು ಬಿಜೆಪಿ ನಾಯಕ ಮತ್ತು ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಸುಪ್ರೀಂ ಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ್ದರು. ಜುಲೈ 9ರಂದು ಈ ಕುರಿತ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತ್ತು.

ಈ ಕುರಿತು ಇಂದು ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ, ಮನವಿಯನ್ನು ತಳ್ಳಿ ಹಾಕಿತು. ಭಾರತ ವಕೀಲರ ಮಂಡಳಿಯು ಈ ಸಂಬಂಧ ಯಾವುದೇ ನಿರ್ಬಂಧ ಹೇರಿಲ್ಲ ಹಾಗೂ ಜನಪ್ರತಿನಿಧಿಗಳು ವಕೀಲ ವೃತ್ತಿ ಮುಂದುವರಿಸುವುದನ್ನು ನಿಷೇಧಿಸಿಲ್ಲ ಎಂದು ತಿಳಿಸಿತು.

ಸಂಸದರು ಅಥವಾ ಶಾಸಕರು ಚುನಾಯಿತ ಪ್ರತಿನಿಧಿಗಳು ಹಾಗೂ ಅವರು ಸರ್ಕಾರದ ಪೂರ್ಣ ಪ್ರಮಾಣದ ಉದ್ಯೋಗಿಗಳಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಯನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್, ಈ ಸಂಬಂಧ ಸಲ್ಲಿಸಲಾಗಿರುವ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Facebook Comments

Sri Raghav

Admin