ಬೆಂಗಳೂರಿನಲ್ಲಿ 49,500 ಮನೆಗಳ ನಿರ್ಮಾಣಕ್ಕೆ ಅ.10ರೊಳಗೆ ಟೆಂಡರ್

ಈ ಸುದ್ದಿಯನ್ನು ಶೇರ್ ಮಾಡಿ

Khadar--UT

ಬೆಂಗಳೂರು,ಸೆ.25- ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಬೆಂಗಳೂರಿನಲ್ಲಿ 49,500 ಮನೆಗಳ ನಿರ್ಮಾಣಕ್ಕೆ ಅ.10ರೊಳಗೆ ಟೆಂಡರ್ ಕರೆಯಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ತಿಳಿಸಿದರು.  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. 49,500 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದಾದ ನಂತರ 2ನೇ ಹಂತದ ಫಲಾನುಭವಿಗಳ ಆಯ್ಕೆ ಕರೆಯಲಾಗುವುದು ಎಂದರು.

ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಟೆಂಡರ್ ಕರೆದು ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ. ಎತ್ತರದ ಕಟ್ಟಡಗಳನ್ನು ಕಟ್ಟುವ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಬಾಂಬೆ, ಹೈದರಾಬಾದ್ ನಗರಗಳಲ್ಲಿ ಅಧ್ಯಯನ ಮಾಡಲಿದ್ದಾರೆ. ಮಾದರಿಯಾದ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶ ಸರ್ಕಾರದ್ದಾಗಿದೆ ಎಂದರು.

ಮೊದಲು ನೆಲಮಹಡಿ ಸೇರಿ ಒಟ್ಟು ನಾಲ್ಕು ಮಹಡಿಗಳ ಕಟ್ಟಡಗಳ ನಿರ್ಮಿಸಬೇಕು ಎಂಬ ಉದೇಶವಿತ್ತು. ಈಗ 10-12 ಮಹಡಿಗಳ ಕಟ್ಟಡ ನಿರ್ಮಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

# ಕೊಳೆಗೇರಿ ನಿವಾಸಿಗಳಿಗೆ 83 ಸಾವಿರ ಮನೆ:
ಬೆಂಗಳೂರು ನಗರ 6367 ಮನೆಗಳು ಸೇರಿದಂತೆ ರಾಜ್ಯದಲ್ಲಿ 83 ಸಾವಿರ ಮನೆಗಳನ್ನು ಕೊಳಗೇರಿ ನಿವಾಸಿಗಳಿಗೆ ನಿರ್ಮಾಣ ಮಾಡಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದರು. ಈಗಾಗಲೇ 62 ಸಾವಿರ ಮನೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಉಳಿದ 21 ಸಾವಿರ ಮನೆಗಳ ನಿರ್ಮಾಣಕ್ಕೂ ರಾಜ್ಯದ ಉನ್ನತ ಮಟ್ಟದ ಸಭೆ ಒಪ್ಪಿಗೆ ಕೊಟ್ಟಿದೆ ಎಂದರು.

ಸ್ಮಾರ್ಟ್ ಸಿಟಿಗಳ ಅನುಷ್ಠಾನಕ್ಕೆ ಶೀಘ್ರವೇ ಚಾಲನೆ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸದಾಗಿ ಸ್ಮಾರ್ಟ್‍ಸಿಟಿಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ 5ನೇ ಸ್ಥಾನದಲ್ಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.  ರಾಜ್ಯದಲ್ಲಿ ಈ ವರ್ಷ 4 ಲಕ್ಷ ಮನೆ ನಿರ್ಮಿಸಲಿದ್ದು, ಗ್ರಾಮೀಣ ಭಾಗದಲ್ಲಿ ಎರಡೂವರೆ ಲಕ್ಷ ಮನೆ ಹಾಗೂ ನಗರ ಪ್ರದೇಶಗಳಲ್ಲಿ ಒಂದೂವರೆ ಲಕ್ಷ ಮನೆ ನಿರ್ಮಾಣ ಮಾಡಲಾಗುವುದು ಎಂದರು.

Facebook Comments

Sri Raghav

Admin