ಲೋಕಸಭೆ ಚುನಾವಣೆ ಬಳಿಕ ಮೂಲೆಗುಂಪಾಗುತ್ತಾರಾ ಬಿಎಸ್ವೈ..? ಪಕ್ಷದೊಳಗೇ ಗುಸುಗುಸು..!

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು,ಸೆ.25- ಮುಂಬರುವ 2019ರ ಲೋಕಸಭೆ ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮೂಲೆಗುಂಪು ಆಗುತ್ತಾರೆ ಎಂಬ ಮಾತುಗಳು ಪಕ್ಷದಲ್ಲಿ ಹರಿದಾಡುತ್ತಿವೆ.  ಪಕ್ಷದಲ್ಲಿ ಯಾವಾಗಲೂ ತಾನು ಪ್ರಾಮುಖ್ಯನಾಗಿರಬೇಕೆಂಬ ಅವರ ಆಸೆಯೇ ಅವರಿಗೆ ಮುಳುವಾಗುವ ಸಾಧ್ಯತೆಯೇ ಹೆಚ್ಚು ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತವೆ.

ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿರುವ ಕೇಂದ್ರದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಪ್ರಸಕ್ತ ವಿದ್ಯಮಾನವನ್ನು ನಿಭಾಯಿಸುತ್ತಿರುವ ರೀತಿ ಅಸಮಾಧಾನ ತಂದಿದೆ ಎನ್ನಲಾಗಿದೆ.   ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಅಧಿಕಾರ ನಡೆಸಲು ಸುಲಭವಾಗಿ ಬಿಟ್ಟುಕೊಟ್ಟಿರುವುದು ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಯವರ ವರ್ಚಸ್ಸಿಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.  ಬಿಎಸ್ ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಎಂಎಲ್ ಸಿ ಲೆಹರ್ ಸಿಂಗ್ ಅವರ ಸಾರ್ವಜನಿಕ ಪತ್ರ ಪಕ್ಷದ ನಾಯಕರ ಪರೋಕ್ಷ ಅಭಿಪ್ರಾಯವೂ ಕೂಡ ಆಗಿದೆ ಎನ್ನಲಾಗಿದ್ದು, ಯಡಿಯೂರಪ್ಪ ಅವರಿಲ್ಲದೆ ಚುನಾವಣೆಯನ್ನು ಎದುರಿಸುವುದು ಸೂಕ್ತ ಎಂದು ನಾಯಕರು ತೀರ್ಮಾನಕ್ಕೆ ಬರುವಂತಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅತೃಪ್ತ ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಒಗ್ಗಟ್ಟಾಗಿ ಮಾಡುತ್ತಿಲ್ಲ. ಬದಲಿಗೆ ಒಬ್ಬೊಬ್ಬ ನಾಯಕರು ಮಾಡುತ್ತಿದ್ದಾರೆ. ಪಕ್ಷದ ಹೊರಗಿನವರು ಈ ಪ್ರಕ್ರಿಯೆಯಲ್ಲಿ ಹೆಚ್ಚು ಭಾಗಿಯಾಗಿದ್ದಾರೆ. ಯಡಿಯೂರಪ್ಪನವರ ಅಭಿಪ್ರಾಯಗಳು, ಅವರ ಕಾರ್ಯವಿಧಾನಗಳನ್ನು ಕೆ .ಎಸ್. ಈಶ್ವರಪ್ಪ, ಆರ್ .ಅಶೋಕ್, ಸಿ.ಟಿ.ರವಿ, ಜಗದೀಶ್ ಶೆಟ್ಟರ್ ಒಪ್ಪಿಕೊಂಡಂತಿಲ್ಲ. ಸಿ .ಪಿ .ಯೋಗೇಶ್ವರ್, ಅಶ್ವತ್ಥನಾರಾಯಣ ಹಾಗೂ ಶೋಭಾ ಕರಂದ್ಲಾಜೆ ಅವರ ಬೆಂಬಲಕ್ಕಿದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಯಡಿಯೂರಪ್ಪನವರನ್ನು ತಮ್ಮ ಪ್ರಾಬಲ್ಯವನ್ನು ಪಕ್ಷದೊಳಗೆ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು.

ಯಡಿಯೂರಪ್ಪನವರಿಗೆ ಆಪ್ತವಾಗಿರುವವರು ಹೇಳುವ ಪ್ರಕಾರ, ಕಾಂಗ್ರೆಸ್ ಅಥವಾ ಜೆಡಿಎಸ್ ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಯಡಿಯೂರಪ್ಪನವರು ಮಾಡಲೇ ಇಲ್ಲ. ಆದರೆ ಕಾಂಗ್ರೆಸ್ ನವರು ಹೇಳುವುದೇ ಬೇರೆ, ಯಡಿಯೂರಪ್ಪನವರು ನಮ್ಮ ಶಾಸಕರೊಬ್ಬರನ್ನು ವಾಟ್ಸಾಪ್ ನಲ್ಲಿ ಪಕ್ಷಕ್ಕೆ ಆಹ್ವಾನಿಸಿ ಹಣದ ಆಮಿಷವೊಡ್ಡಿದ್ದಾರೆ ಎಂದು ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ಯಡಿಯೂರಪ್ಪನವರ ಈ ಕ್ರಮ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮೇಲೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಆತಂಕ ಬಿಜೆಪಿ ಕೇಂದ್ರ ನಾಯಕರದ್ದು.   ಲೋಕಸಭೆ ಚುನಾವಣೆಯಲ್ಲಿ 22ರಿಂದ 23 ಸೀಟುಗಳನ್ನು ರಾಜ್ಯದಲ್ಲಿ ಗೆಲ್ಲಬೇಕೆಂದು ಗುರಿ ಹೊಂದಿರುವ ಯಡಿಯೂರಪ್ಪನವರು ಅದಕ್ಕೆ ತಕ್ಕಂತೆ ಈಗಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಮುರಿಯುವ ಪ್ರಯತ್ನ ಮಾಡುತ್ತಿಲ್ಲ. ಆಪರೇಷನ್ ಕಮಲ ಮಾಡಿದರೆ ಎಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆಯಾಗುತ್ತದೆಯೋ ಎಂಬ ಆತಂಕ ಬಿಜೆಪಿ ನಾಯಕರಲ್ಲಿದೆ. ರಾಜ್ಯ ಬಿಜೆಪಿ ನಾಯಕರ ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿರುವ ಕಾಂಗ್ರೆಸ್ ಆಪರೇಷನ್ ಕಮಲ ಎಂಬ ಶಬ್ದವನ್ನು ಪ್ರತಿನಿತ್ಯವೆಂಬಂತೆ ಬಳಸುತ್ತಿದೆ.

Facebook Comments

Sri Raghav

Admin