ಯಾವ ಶಾಸಕರಿಗೂ ನನ್ನ ವಿರುದ್ಧ ಅಸಮಾಧಾನವಿಲ್ಲ : ಡಿಸಿಎಂ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಸೆ.26-ಬಡ್ತಿ ಮೀಸಲಾತಿ ಸಂಬಂಧ ನ್ಯಾಯಾಲಯದ ತೀರ್ಪನ್ನು ಇನ್ನು ಗಮನಿಸಿಲ್ಲ. ಸಂಪೂರ್ಣ ವಾಗಿ ಪರಿಶೀಲಿಸಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ವಸಂತನಗರದ ಮಿಲ್ಲರ್ಸ್ ರಸ್ತೆ ಜಂಕ್ಷನ್‍ನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪನ್ನು ಪರಾಮರ್ಶಿಸದೆ ಸುಮ್ಮಸುಮ್ಮನೆ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ ಎಂದರು.

ನಿನ್ನೆ ನಡೆದ ಸಿಎಲ್‍ಪಿ ಸಭೆಯಲ್ಲಿ ನಿಮ್ಮ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರಂತಲ್ಲ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು , ಯಾವುದೇ ಶಾಸಕರು ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಲ್ಲ. ಇದೆಲ್ಲ ಮಾಧ್ಯಮ ಸೃಷ್ಟಿ ಎಂದರು. ಎಲ್ಲಾ ಶಾಸಕರು ತಮ್ಮ ಸಮಸ್ಯೆಗಳನ್ನು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಯವರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೆ ನನ್ನನ್ನು ಸಂಪರ್ಕಿಸಿ ನಿಮ್ಮ ಪ್ರತಿನಿಧಿಯಾಗಿ ಸಿಎಂ ಭೇಟಿ ಮಾಡಿ. ನಿಮ್ಮ ಬೇಡಿಕೆಗಳನ್ನು ಅವರಿಗೆ ಸಲ್ಲಿಸುತ್ತೇನೆ ಎಂಬುದಾಗಿ ಶಾಸಕರಿಗೆ ತಿಳಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

# ಯುವಪೀಳಿಗೆಗೆ ಕಾರ್ಯಪ್ಪ ಮಾದರಿ:
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ನಮ್ಮ ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದವರು. ಅವರ ಪರಿಶ್ರಮ ಅಪಾರ. ಕಾರಿಯಪ್ಪ ಅವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಇಂದು ಕಾರ್ಯಪ್ಪ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅವರ ಹೆಸರನ್ನು ಈ ಜಂಕ್ಷನ್‍ಗೆ ಇಡುವ ಪ್ರಸ್ತಾವನೆ ಸಂಘಟಕರು ಸಲ್ಲಿಸಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

# ಕೆರೆ ಅಭಿವೃದ್ಧಿ :
ನಗರದಲ್ಲಿ 380ಕ್ಕೂ ಹೆಚ್ಚು ಕೆರೆಗಳಿವೆ. ಇವುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸಲು ಉದ್ದೇಶಿಸಿದ್ದೇವೆ. ಇತ್ತೀಚೆಗೆ ನಗರದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಕೆರೆಗಳನ್ನು ಅಭಿವೃದ್ದಿಪಡಿಸಿದರೆ ಮುಂದೆ ನೀರಿಗೆ ತೊಂದರೆಯಾಗಲಾರದು ಎಂದು ಪರಮೇಶ್ವರ್ ಹೇಳಿದರು. ಮುಂದಿನ ಐದಾರು ವರ್ಷಗಳಲ್ಲಿ ಬಿಎಂಟಿಸಿಯಲ್ಲಿರುವ ಪೆಟ್ರೋಲ್ ಬಸ್‍ಗಳನ್ನು ಬದಲಾಯಿಸಿ ಎಲೆಕ್ಟ್ರಿಕ್ ಚಾಲಿತ ಬಸ್‍ಗಳನ್ನು ಬಳಕೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಇನ್ನು ಎರಡು ಮೂರು ತಿಂಗಳಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್‍ಗಳು ರಸ್ತೆಗಿಳಿಯಲಿವೆ ಎಂದು ಪರಮೇಶ್ವರ್ ತಿಳಿಸಿದರು.

Facebook Comments

Sri Raghav

Admin