ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಪ್ರಕರಣದ ಆರೋಪಿ ಮೇಲೆ ಪೊಲೀಸ್ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಬೆಂಗಳೂರು, ಸೆ.26- ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅರುಣ್ ಕುಮಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಮನೋಜ್ ಅಲಿಯಾಸ್ ಕೆಂಚ ಗುಂಡೇಟಿನಿಂದ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಕೊಲೆ ಪ್ರಕರಣದ  ಪ್ರಮುಖ ಆರೋಪಿ. ಈತನ ಸ್ನೇಹಿತ ಮಂಜೇಗೌಡ ಎಂಬಾತನನ್ನೂ ಸಹ ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಕೆಂಚನ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಅಪಹರಣ, ಕೊಲೆಯತ್ನ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ಆರೋಪಿಗಳು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರ್ವೀಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾರೆ ಎಂಬ ಸುದ್ದಿ ತಿಳಿದ ಯಲಹಂಕ ಇನ್ಸ್‍ಪೆಕ್ಟರ್ ಮಂಜೇಗೌಡ ಮತ್ತು ವಿದ್ಯಾರಣ್ಯಪುರ ಇನ್ಸ್‍ಪೆಕ್ಟರ್ ರಾಮಮೂರ್ತಿ ಅವರ ನೇತೃತ್ವದ ತಂಡ ಜೀಪ್‍ಗಳಲ್ಲಿ ಧಾವಿಸಿ ಕಾರನ್ನು ಅಡ್ಡಗಟ್ಟಿದೆ.

ತಕ್ಷಣ ಪೊಲೀಸರು ಆರೋಪಿಗಳನ್ನು ಹಿಡಿಯಲು ಹೋದಾಗ ಆರೋಪಿ ಮನೋಜ್ ಅಲಿಯಾಸ್ ಕೆಂಚ ಪೊಲೀಸರ ಮೇಲೆ ಡ್ರಾಗರ್‍ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ. ತಕ್ಷಣ ಇನ್ಸ್‍ಪೆಕ್ಟರ್‍ಗಳಾದ ಮಂಜೇಗೌಡ ಮತ್ತು ರಾಮಮೂರ್ತಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಎಚ್ಚರಿಕೆ ನೀಡಿದರು.

ಎಚ್ಚರಿಕೆಯನ್ನೂ ಲೆಕ್ಕಿಸದೆ ಪೊಲೀಸರ ಮೇಲೆಯೇ ಆರೋಪಿ ಮುಗಿಬಿದ್ದಾಗ ಆತ್ಮರಕ್ಷಣೆಗೆ ಇನ್ಸ್‍ಪೆಕ್ಟರ್‍ಗಳು ಹಾರಿಸಿದ ಗುಂಡುಗಳು ಆತನ ಕೈ ಮತ್ತು ಕಾಲಿಗೆ ತಗುಲಿದ್ದರಿಂದ ಕುಸಿದು ಬಿದ್ದ. ತಕ್ಷಣ ಆತನನ್ನು ಸುತ್ತುವರಿದ ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.  ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಇನ್ನೊಬ್ಬ ಆರೋಪಿ ಮಂಜೇಗೌಡನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ಹೆಡ್ ಕಾನ್ಸ್‍ಟೆಬಲ್ ಉದಯ್ ಕುಮಾರ್ ಹಾಗೂ ಕಾನ್ಸ್ಟೆಬಲ್ ಮಹಾದೇವಮೂರ್ತಿ ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Facebook Comments

Sri Raghav

Admin