ಲೋಕಸಭೆ ಚುನಾವಣೆಯತ್ತ ಬಿಜೆಪಿ ಚಿತ್ತ, ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್

ಈ ಸುದ್ದಿಯನ್ನು ಶೇರ್ ಮಾಡಿ

BJP-Jayanagara--01
ಬೆಂಗಳೂರು,ಸೆ.26-ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ದೂರ ಸರಿದಿರುವ ಬಿಜೆಪಿ ಇದೀಗ ಲೋಕಸಭೆ ಚುನಾವಣೆಯತ್ತ ಚಿತ್ತ ಹರಿಸಿದೆ.   ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ 20 ಕ್ಷೇತ್ರಗಳನ್ನಾದರೂ ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕೆಂದು ಹವಣಿಸುತ್ತಿರುವ ಬಿಜೆಪಿ ಇದಕ್ಕಾಗಿ ರಣತಂತ್ರವನ್ನು ರೂಪಿಸುತ್ತಿದೆ.   ಸದ್ಯಕ್ಕೆ 24 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು ಕೇವಲ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಶೋಧ ಕಾರ್ಯ ನಡೆದಿದೆ.

ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮಗೊಂಡಿಲ್ಲ. ಉಳಿದಿರುವ ಎಲ್ಲಾ ಕ್ಷೇತ್ರಗಳಿಗೂ ಬಿಜೆಪಿ ಹುರಿಯಾಳುಗಳನ್ನು ಸಜ್ಜುಗೊಳಿಸಿದೆ.  ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಕ್ಟೋಬರ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರ, ಅಭ್ಯರ್ಥಿಗಳ ಆಯ್ಕೆ, ಕೈಗೊಳ್ಳಬೇಕಾದ ರಣತಂತ್ರಗಳು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ಸೇರಿದಂತೆ ಹಲವು ತಂತ್ರಗಳನ್ನು ರೂಪಿಸಲಿದ್ದಾರೆ.

ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಈಗಾಗಲೇ ದೇಶಾದ್ಯಂತ ಚುನಾವಣಾ ಪ್ರಚಾರವನ್ನು ಕೈಗೊಂಡಿದೆ.  ಡಿಸೆಂಬರ್ ತಿಂಗಳಿನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ, ಮಿಜೋರಾಂ ಹಾಗೂ ತೆಲಂಗಾಣ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಬೇಕೆಂದು ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕೋರ್ ಕಮಿಟಿ ಹಾಗೂ ಆರ್‍ಎಸ್‍ಎಸ್ ಮುಖಂಡರ ಜೊತೆ ಮಾತುಕತೆ ನಡೆಸಿದ್ದು, 28 ಲೋಕಸಭಾ ಕ್ಷೇತ್ರಗಳಿಗೆ ಗೆಲ್ಲುವ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ .  ಸದ್ಯಕ್ಕೆ ಲೋಕಸಭೆ ಚುನಾವಣೆಗೆ ಗಮನಹರಿಸಬೇಕೆಂದು ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಧಿಕಾರ ರಚಿಸುವ ಪ್ರಯತ್ನದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.

# ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್:
2014ರ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬರೋಬ್ಬರಿ 17 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಗೆದ್ದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಉಡುಪಿ, ಚಿಕ್ಕಮಗಳೂರು,ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.  ಒಂದು ವೇಳೆ ಡಿವಿಎಸ್ ಉಡುಪಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದರೆ ಬೆಂಗಳೂರು ಉತ್ತರದಿಂದ ಮಾಜಿ ಶಾಸಕ ದಾಸರಹಳ್ಳಿಯ ಮುನಿರಾಜು ಸ್ಪರ್ಧಿಸುವ ಸಾಧ್ಯತೆ ಇದೆ.

ಹಾಲಿ ಲೋಕಸಭಾ ಸದಸ್ಯರಾಗಿರುವ ಶೋಭಾ ಕರಂದ್ಲಾಜೆ ಅವರನ್ನು ವಿಧಾನಪರಿಷತ್‍ಗೆ ಕಳುಹಿಸುವ ಬಗ್ಗೆ ಚಿಂತನೆ ನಡೆದಿದೆ. ಮೈಸೂರು-ಕೊಡಗಿನಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಹೆಸರು ಕೇಳಿಬಂದಿದೆಯಾದರೂ ಸಕ್ರೀಯ ರಾಜಕಾರಣಕ್ಕೆ ಬರುವ ಬಗ್ಗೆ ಈವರೆಗೆ ಅವರು ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.   ಹಾಲಿ ಸಂಸದ ಪ್ರತಾಪ್ ಸಿಂಹ ಈ ಕ್ಷೇತ್ರದಿಂದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿಯಿಂದ ಹಾಲಿ ಅಭ್ಯರ್ಥಿಗಳಾದ ನಳೀನ್‍ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಸುರೇಶ್ ಅಂಗಡಿ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಬಂದಿದೆ.   ಆದರೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಇರುವುದರಿಂದ ಹಾಲಿ ಅಭ್ಯರ್ಥಿಗಳನ್ನುಬದಲಿಸುವಂತಹ ಹೊಸ ಪ್ರಯೋಗಕ್ಕೆ ಕೈ ಹಾಕುವ ಸಾಧ್ಯತೆಗಳು ಇಲ್ಲ.   ದೋಸ್ತಿ ಸರ್ಕಾರಕ್ಕೆ ಸೆಡ್ಡು ಹೊಡೆಯಬೇಕಾದರೆ ಕೆಲವು ಕ್ಷೇತ್ರಗಳಲ್ಲಿ ಹಳೆಯ ಮುಖಗಳಿಗೆ ಮಣೆ ಹಾಕುವುದು ಅನಿವಾರ್ಯ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ಬಂದಿದೆ.

# ಬಿಎಸ್‍ವೈ ರಾಜ್ಯ ಪ್ರವಾಸ:
ಇನ್ನು ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಬಿ.ಎಸ್.ಯಡಿಯೂರಪ್ಪ ಅಕ್ಟೋಬರ್ ತಿಂಗಳಿನಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದಾರೆ.
ಸರ್ಕಾರ ರಚಿಸುವ ತೀರ್ಮಾನದಿಂದ ಹಿಂದೆ ಸರಿದಿರುವ ಅವರು ಅಕ್ಟೋಬರ್ 2ರ ಗಾಂಧಿ ಜಯಂತಿ ಬಳಿಕ ರಾಜ್ಯಾದ್ಯಂತ ಪ್ರವಾಸ ಆರಂಭಿಸಿ ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.  ಅಮಿತ್ ಷಾ ಅವರು ರಾಜ್ಯಕ್ಕೆ ಬರುವ ಮುನ್ನವೇ 28 ಲೋಕಸಭಾ ಕ್ಷೇತ್ರಗಳಿಗೂ ಪಟ್ಟಿ ಅಖೈರುಗೊಳಿಸಲು ರಾಜ್ಯ ನಾಯಕರು ಮುಂದಾಗಿದ್ದಾರೆ.

# ಅಭ್ಯರ್ಥಿಗಳ ಪಟ್ಟಿ: BJP-List--1

Facebook Comments

Sri Raghav

Admin