5,300 ಕೋಟಿ ವಂಚಕ ನಿತಿನ್’ಗಾಗಿ ಇಂಟೆರ್ ಪೋಲ್ ಮೊರೆಹೋದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Nitin
ನವದೆಹಲಿ, ಸೆ.26 (ಪಿಟಿಐ)- ಬ್ಯಾಂಕುಗಳಿಂದ 5,300 ಕೋಟಿ ರೂ.ಗಳಿಗೆ ಹೆಚ್ಚು ಸಾಲ ಪಡೆದು ನೈಜೀರಿಯಾಕ್ಕೆ ಪರಾರಿಯಾಗಿರುವ ಗುಜರಾತ್ ಮೂಲದ ಸ್ಟಲಿಂಗ್ ಬಯೋಟೆಕ್ ಸಂಸ್ಥೆಯ ನಿರ್ದೇಶಕ ನಿತಿನ್ ಸಂದೇಸರ ಮತ್ತು ಆತನ ಕುಟುಂಬದ ಸದಸ್ಯರನ್ನು ಬಂಧಿಸಿ ಭಾರತಕ್ಕೆ ಕರೆತರುವ ಯತ್ನವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಮುಂದುವರಿಸಿದೆ.

ಈ ಸಂಬಂಧ ನೈಜೀರಿಯಾದ ಇಂಟೆರ್ ಪೋಲ್ (ಅಂತಾರಾಷ್ಟ್ರೀಯ ಪೊಲೀಸ್) ಅಧಿಕಾರಿಗಳನ್ನು ಸಂಪರ್ಕಿಸಿರುವ ಸಿಬಿಐ ಸಂದೇಸರ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಂಡು ಅವರನ್ನು ಬಂಧಿಸಲು ಮತ್ತು ಭಾರತಕ್ಕೆ ಕರೆತರಲು ನೆರವಾಗಬೇಕೆಂದು ಮನವಿ ಮಾಡಿದೆ.  ಈ ಹಗರಣದಲ್ಲಿ ಆಂಧ್ರಬ್ಯಾಂಕ್ ಮಾಜಿ ನಿರ್ದೇಶಕ, ಲೆಕ್ಕಪರಿಶೋಧಕರೂ ಶಾಮೀಲಾಗಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ವಡೋದರಾ ಮೂಲದ ನಿತಿನ್ ಹಾಗೂ ಸಂಸ್ಥೆಯ ಇತರ ನಿರ್ದೇಶಕರಾದ ನಿತಿನ್ ಸಹೋದರ ಚೇತನ್ ಸಂದೇಸರ ಹಾಗೂ ಆತನ ಪತ್ನಿ ದೀಪ್ತಿಬೆನ್ ಸಂದೇಸರ ವಿರುದ್ಧ ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ(ಇಡಿ) ಇತ್ತೀಚೆಗಷ್ಟೇ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿತ್ತು.  ಈ ನಡುವೆ ನಿತಿನ್ ಮತ್ತು ಕುಟುಂಬದವರು ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದಲ್ಲಿ ಇದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅವರು ನೈಜೀರಿಯಾಕ್ಕೆ ಪರಾರಿಯಾಗಿದ್ದು ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇವರು ಯುಎಇನಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ಅವರನ್ನು ಹಸ್ತಾಂತರಕ್ಕೆ ಪಡೆಯಲು ಸಿಬಿಐ ಮತ್ತು ಇಡಿ ಅಧಿಕಾರಿಗಳು ಅಲ್ಲಿನ ಉನ್ನತಾಧಿಕಾರಿಯನ್ನು ಸಂಪರ್ಕಿಸಿದ್ದರು. ಆದರೆ ಅದಕ್ಕೂ ಮೊದಲೇ ಅವರು ಅಲ್ಲಿಂದ ನೈಜೀರಿಯಾಕ್ಕೆ ಹಾರಿದ್ದರು. ಭಾರತವು ನೈಜೀರಿಯಾ ಜೊತೆ ಅಪರಾಧಿಗಳ ಹಸ್ತಾಂತರ ಒಪ್ಪಂದ ಅಥವಾ ಪರಸ್ಪರ ಕಾನೂನು ಸಹಕಾರ ನೆರವು ಒಡಂಬಂಡಿಕೆ ಮಾಡಿಕೊಂಡಿಲ್ಲ. ಹೀಗಾಗಿ ನೈಜೀರಿಯಾದಿಂದ ನಿತಿನ್ ಚೇತನ್, ದೀಪ್ತಿ ಸೇರಿದಂತೆ ಅವರ ಕುಟುಂಬವನ್ನು ಭಾರತಕ್ಕೆ ಕರೆತರುವುದು ಕಷ್ಟವಾಗಿದೆ. ಇದಕ್ಕಾಗಿ ಸಿಬಿಐ ಈಗ ಇಂಟೆರ್ ಪೋಲ್ ನೆರವು ಕೋರಿದೆ.

Facebook Comments

Sri Raghav

Admin