ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ವಹಿವಾಟು, 200 ಕೋಟಿ ವಂಚನೆ, ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

3-Arrested

ಬೆಂಗಳೂರು, ಸೆ.26- ದೇಶದಲ್ಲಿ ಅತಿದೊಡ್ಡ ಜಿಎಸ್‍ಟಿ ವಂಚನೆ ಪ್ರಕರಣವನ್ನು ಭೇದಿಸಿರುವ ದಕ್ಷಿಣ ವಲಯ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದಾರೆ.  ವಿಕ್ರಂ ದುಗ್ಗಲ್, ಅಶ್ಫಾಕ್ ಅಹ್ಮದ್ ಮತ್ತು ನಯಾಜ್ ಅಹ್ಮದ್ ಬಂಧಿತ ಆರೋಪಿಗಳು. ಇವರು ಟಿ.ದಾಸರಹಳ್ಳಿ ಮತ್ತು ಚಿಕ್ಕಬಾಣಾವರದಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ನಿತೀಶ್ ಪಟೇಲ್ ಅವರ ನೇತೃತ್ವದ ತಂಡ ಕಳೆದ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಆರೋಪಿಗಳನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೂವರು ಕಿಂಗ್‍ಪಿನ್‍ಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದ ವೇಳೆ 14 ಕಡೆಗಳಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಬಳಿಕ ಎಲ್ಲ ಕಡೆ ದಾಳಿ ನಡೆಸಿ ಮಹತ್ವದ ದಾಖಲೆ, ಕಡತಗಳು, ಲ್ಯಾಪ್‍ಟಾಪ್‍ಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು ಒಟ್ಟು 203 ಕೋಟಿರೂ. ಬೋಗಸ್ ಜಿಎಸ್‍ಟಿ ಬಿಲ್‍ಗಳನ್ನು ನೂರಾರು ಡೀಲರ್‍ಗಳಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ವಿಚಾರಣೆಯ ವೇಳೆ 203 ಕೋಟಿ ರೂ.ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಆದರೆ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಜಿಎಸ್‍ಟಿ ವಂಚಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳು ನಕಲಿ ಕಂಪನಿಗಳನ್ನು ಸ್ಥಾಪಿಸಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದರು. ಮಾತ್ರವಲ್ಲ ನಕಲಿ ಇನ್‍ವಾಯಿಸ್‍ಗಳನ್ನು ಸೃಷ್ಟಿಸಿ ಸರ್ಕಾರದಿಂದಲೇ ಹಣ ಪಡೆದು ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳು ರಾಜ್ಯದ ವಿವಿಧೆಡೆ 2ಸಾವಿರ ಕೋಟಿಗೂ ಅಧಿಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ದಾಳಿ ಸೂಚನೆ ಅರಿತು ಆರೋಪಿಗಳು ಅಂಗಡಿಗಳನ್ನು ಮುಚ್ಚಿ ಪರಾರಿಯಾಗಿದ್ದರು. ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿಗಳ ಹೆಸರಿನಲ್ಲಿಯೂ ನಕಲಿ ಬಿಲ್‍ಗಳನ್ನು ಸೃಷ್ಟಿಸಿದ್ದರು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನಿತೀಶ್ ಪಟೇಲ್ ತಿಳಿಸಿದ್ದಾರೆ.

ಬೆಂಗಳೂರು, ಗದಗ, ಮೈಸೂರು, ಇಳಕಲ್, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ತೆರಿಗೆ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ. ರತನ್ ಎಂಟರ್ ಪ್ರೈಸಸ್, ರಾಜೀವ್ ಎಂಟರ್ ಪ್ರೈಸಸ್, ರಮನ್, ರಾಹುಲ್, ರಾಯಲ್, ಆಕಾಶ್ ಎಂಟರ್ ಪ್ರೈಸಸ್ ಸೇರಿದಂತೆ ಹಲವು ಕಂಪೆನಿಗಳ ಹೆಸರಿನಲ್ಲಿ ವಂಚನೆ ಹೆಸಗಿದ್ದಾರೆ ಎಂದು ಅವರು ಹೇಳಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ರವಿ ಕುಮಾರ್, ಸಹಾಯಕ ಆಯುಕ್ತರಾದ ಯೋಗಾನಂದ್, ಕಿರಣ್ ಬಿರಾದಾರ್, ಜಯವೀರ್ ಗಾಂವ್ಕರ್ ಮತ್ತು ತಂಡದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲೇ ಇದು ಅತಿ ದೊಡ್ಡ ಜಿಎಸ್‍ಟಿ ವಂಚನೆ ಪ್ರಕರಣವಾಗಿದ್ದು, ಜಿಎಸ್‍ಟಿ ಜಾರಿಯಾದ ಬಳಿಕ ವಾಣಿಜ್ಯ ತೆರಿಗೆ ಇಲಾಖೆ ಉದ್ಯಮ ನಡೆಸುತ್ತಿರುವವರ ಮೇಲೆ ತೀವ್ರ ನಿಗಾ ಇಟ್ಟಿದೆ. ಇತ್ತೀಚೆಗಷ್ಟೇ ಅಧಿಕಾರಿಗಳು ತೆರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ತಮಿಳುನಾಡಿನ ಮಧುರೈಯಲ್ಲಿ ಬಂಧಿಸಿದ್ದರು.

Facebook Comments

Sri Raghav

Admin