ಜಮೀನು ಕಬಳಿಕೆಗಾಗಿ ಕೊಲೆ ಮೇಲೆ ಕೊಲೆ, ಡಾಕ್ಟರ್ ಸೇರಿ 9 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Police--01

ಬೆಂಗಳೂರು, ಸೆ.26- ಕುತೂಹಲಕಾರಿ ತಿರುವುಗಳಿರುವ ಎರಡು ಕೊಲೆ ಪ್ರಕರಣಗಳನ್ನು ಭೇದಿಸಿರುವ ಬೆಂಗಳೂರು ಗ್ರಾಮಾಂತರ ಪೊಲೀಸರು, ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣದ ಹಿಂದೆ ಮಾನವೀಯತೆ ಮರೆತ ರಿಯಲ್ ಎಸ್ಟೇಟ್ ದಂಧೆ ಹಣಕ್ಕಾಗಿ ಮನುಷ್ಯರ ಜೀವವನ್ನು ಎಷ್ಟು ನಿಕೃಷ್ಟವಾಗಿ ಕಾಣುತ್ತಿದೆ ಎಂಬ ಕಠೋರ ಸತ್ಯ ಬಯಲಾಗಿದೆ. ಪತ್ನಿಯನ್ನು ಕೊಲೆ ಮಾಡಿ ಆಕೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಪತಿ ಪ್ರಯತ್ನಿಸುತ್ತಾನೆ. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೇನಾಮಿ ಜಮೀನು ಕಬಳಿಸಲು ಅನಾಮಿಕ ಅಮಾಯಕ ವೃದ್ಧನನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತದೆ.

# ಘಟನೆ ವಿವರ:
ಹೊಸಕೋಟೆ ತಾಲ್ಲೂಕಿನ ನಿಂಬೆಕಾಯಿಪುರ ಗ್ರಾಮದಲ್ಲಿ ಜಮೀನಿನ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ವೆಂಕಟಸ್ವಾಮಿ ಅವರ ಪತ್ನಿ ಸುಧಾರಾಣಿ ಸೆ.18ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಬರುತ್ತದೆ. ಹೊಸಕೋಟೆ ಡಿವೈಎಸ್‍ಪಿ ಕುಮಾರ್ ಮತ್ತು ಎಸ್‍ಪಿ ಟಿ.ಪಿ.ಶಿವಕುಮಾರ್ ಅವರು ಪ್ರಕರಣದ ಬಗ್ಗೆ ಅನುಮಾನಗೊಂಡು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಸುಧಾರಾಣಿ ಅವರ ಪತಿ ವೆಂಕಟಸ್ವಾಮಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಆಕೆಯನ್ನು ನಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಮತ್ತೊಂದು ಕೊಲೆಯ ರಹಸ್ಯ ಆಕೆಗೆ ತಿಳಿದ ಕಾರಣಕ್ಕಾಗಿ ಆಕೆಯ ಬಾಯಿ ಮುಚ್ಚಿಸಲು ಕೊಲೆ ಮಾಡಿದ್ದಾಗಿ ವೆಂಕಟಸ್ವಾಮಿ ಪೊಲೀಸರಿಗೆ ಹೇಳಿಕೆ ನೀಡುತ್ತಾನೆ. ಆ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ವಿಚಿತ್ರ ತಿರುವುಗಳು ಎದುರಾಗುತ್ತವೆ.

# ಅನಾಮಿಕ ಆಸ್ತಿ:
ಬೆಂಗಳೂರು ಪೂರ್ವ ತಾಲ್ಲೂಕಿನ ಬೆಳ್ಳತ್ತೂರು ಗ್ರಾಮದ ಸರ್ವೆ ನಂ.81ರಲ್ಲಿ ಒಂದು ಎಕರೆ 8 ಗುಂಟೆ ಜಮೀನಿದ್ದು, ಅದರ ಮೌಲ್ಯ 12ರಿಂದ 18 ಕೋಟಿ ರೂ.ಗಳು. ಆ ಜಮೀನಿಗೆ ಸದ್ಯಕ್ಕೆ  ಯಾರೂ ವಾರಸುದಾರರಿಲ್ಲ. 1926-27ನೇ ಸಾಲಿನಲ್ಲಿ ಮೈಸೂರು ಮಹಾರಾಜರು ನಂಜಪ್ಪ ಎಂಬುವರ ಹೆಸರಿಗೆ ಈ ಜಮೀನನ್ನು ಕೊಟ್ಟಿರುವುದಾಗಿ ದಾಖಲೆಗಳಿವೆ. ಈವರೆಗೂ ಪಹಣಿ ಅವರ ಹೆಸರಿನಲ್ಲೇ ಬರುತ್ತಿದೆ. ಆದರೆ ನಂಜಪ್ಪ ಮತ್ತು ಅವರ ವಾರಸುದಾರರು ಪತ್ತೆಯಿಲ್ಲ.

ಬೆಳ್ಳತ್ತೂರು ಗ್ರಾಮದ ರಮೇಶ್ ಎಂಬಾತ ಆ ಜಮೀನಿನ ಮೇಲೆ ಕಣ್ಣು ಹಾಕಿ ಅದನ್ನು ಕಬಳಿಸಲು ಪ್ರಯತ್ನಿಸುತ್ತಾನೆ. ನಂಜಪ್ಪ ಮತ್ತು ಆತನ ವಾರಾಸುದಾರರು ಲಭ್ಯವಿಲ್ಲದಿದ್ದುದರಿಂದ ನಂಜಪ್ಪನನ್ನು ಹೋಲುವ 95ರಿಂದ 100 ವಯಸ್ಸಿನ ವೆಂಕಟರಮಣಪ್ಪ ಎಂಬುವರನ್ನು ಕರೆತರಲಾಗುತ್ತದೆ. ವೆಂಕಟರಮಣಪ್ಪನನ್ನು ನಂಜಪ್ಪ ಎಂದು ಬಿಂಬಿಸಿ ಆಧಾರ್‍ಕಾರ್ಡ್, ವೋಟರ್ ಐಡಿ, ವಾಸ ದೃಢೀಕರಣ ಪತ್ರವನ್ನು ಮಾಡಿಸಲಾಗುತ್ತದೆ. ಅಷ್ಟರಲ್ಲಿ ಇದೇ ಜಮೀನಿನ ಮೇಲೆ ಮತ್ತಷ್ಟು ಮಂದಿ ಕಣ್ಣು ಹಾಕಿ ನಕಲಿ ದಾಖಲಾತಿಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಾರೆ.

ಇದರಿಂದ ಆತಂಕಕ್ಕೊಳಗಾದ ರಮೇಶ್, ನಂಜಪ್ಪ ಹೆಸರಿನಲ್ಲಿದ್ದ ವೆಂಕಟರಮಣಪ್ಪನನ್ನು ತಾನು ಕೊನೆಗಾಲದಲ್ಲಿ ಪಾಲನೆ ಮಾಡಿದ್ದಾಗಿ ಮತ್ತು ಅವರು ಸಾಯುವ ಮುನ್ನ ಜಮೀನನ್ನು ತನಗೆ ದಾನ ಪತ್ರ ಬರೆದುಕೊಟ್ಟಿದ್ದಾಗಿ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಆದರೆ, ವೆಂಕಟರಮಣಪ್ಪ ಇನ್ನೂ ಜೀವಂತವಾಗಿರುವುದರಿಂದ ಜಮೀನಿನ ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ರಮೇಶ್ ಸಾಧ್ಯವಾಗುವುದಿಲ್ಲ.

ವೆಂಕಟರಮಣಪ್ಪನನ್ನು ಸಾಯಿಸಲು ಪ್ರಯತ್ನಿಸುತ್ತಾನೆ. ಆದರೆ, ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್ (60) ಅದಕ್ಕೆ ಅವಕಾಶ ನೀಡುವುದಿಲ್ಲ. ಬೇನಾಮಿ ದಾಖಲೆ ಸೃಷ್ಟಿಸಿಕೊಳ್ಳಲು ತಮ್ಮ ತಂದೆಯನ್ನು ಬಳಸಿಕೊಳ್ಳಲು ವೆಂಕಟೇಶ್ ತಂದೆಯನ್ನು ಸಾಯಿಸಲು ಅವಕಾಶ ನೀಡುವುದಿಲ್ಲ. ಆ ವೇಳೆ ಇಕ್ಕಟ್ಟಿಗೆ ಸಿಲುಕಿದ ರಮೇಶ್ ಮತ್ತೊಬ್ಬ ಅನಾಮದೇಯ ವ್ಯಕ್ತಿಯನ್ನು ಕರೆತರುವಂತೆ ಮಾದಿಗ ದಂಡೋರದ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಲಿಯಾಸ್ ಸಾಹುಕಾರ್ ಶಂಕರಪ್ಪ (55) ಅವರಿಗೆ ಸೂಚನೆ ನೀಡುತ್ತಾನೆ.  ಈ ಮೊದಲು ವೆಂಟಕರಮಣಪ್ಪ ಅವರನ್ನು ಇದೇ ಶಂಕರಪ್ಪ ಕರೆತಂದಿರುತ್ತಾರೆ. ಈಗ ಮತ್ತೊಬ್ಬ ವ್ಯಕ್ತಿಯ ಹುಡುಕಾಟ ನಡೆಸುವ ವೇಳೆ ಕೋಲಾರ ಬಸ್ ನಿಲ್ದಾಣದಲ್ಲಿ 65 ವರ್ಷ ವಯಸ್ಸಿನ ಮುಳಬಾಗಿಲು ತಾಲ್ಲೂಕಿನ ವ್ಯಕ್ತಿ ಕೃಷ್ಣಪ್ಪ ಇವರ ಕಣ್ಣಿಗೆ ಬೀಳುತ್ತಾರೆ.

ಕೃಷ್ಣಪ್ಪ ಮಗಳೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಬಂದು ಬಸ್ ನಿಲ್ದಾಣದಲ್ಲಿ ಮಲಗಿರುತ್ತಾರೆ. ಆತ ಗಾರೆ ಕೆಲಸ ಮಾಡುವವರಾಗಿದ್ದು, ಒಳ್ಳೆಯ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಶಂಕರಪ್ಪ ಆತನನ್ನು ಕರೆತರುತ್ತಾರೆ. ಆತನಿಗೆ ಮದ್ಯದಲ್ಲಿ ಬೇಧಿ ಮಾತ್ರೆ ಹಾಕಿ ಕುಡಿಸಿ ಆರೋಗ್ಯ ಹದಗೆಡುವಂತೆ ಮಾಡುತ್ತಾರೆ. ಅದಕ್ಕೂ ಮೊದಲು ಮಾರಗೊಂಡನಹಳ್ಳಿ ಅಮೃತ್ ಮೆಡಿಕಲ್ ಸೆಂಟರ್‍ನ ವೈದ್ಯರಾದ 70 ವರ್ಷದ ಡಾ.ಕುಲಕರ್ಣಿ ಅವರನ್ನು ಸಂಪರ್ಕಿಸಿ ಒಬ್ಬ ವ್ಯಕ್ತಿಯ ಹೆಸರಿಗೆ ಮರಣ ಪ್ರಮಾಣ ಪತ್ರ ನೀಡುವಂತೆ ರಮೇಶ್ ಬೇಡಿಕೆ ಇಡುತ್ತಾರೆ. ಆದರೆ, ಶವ ಇಲ್ಲದ ಹೊರತು ಮರಣ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಕೃಷ್ಣಪ್ಪನನ್ನು ಕರೆತರಲಾಗುತ್ತದೆ.

ಕೃಷ್ಣಪ್ಪನನ್ನು ಸಂಜೆ 4 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅದಕ್ಕೂ ಮುನ್ನ ಬೆಳಗ್ಗೆ 12 ಗಂಟೆಗೆ ಡಾ.ಕುಲಕರ್ಣಿ ಜಮೀನಿನ ಹಕ್ಕುದಾರರಾದ ನಂಜಪ್ಪ ಅವರ ಹೆಸರಿಗೆ ಮರಣ ಪ್ರಮಾಣ ಪತ್ರವನ್ನು ಬರೆದಿಟ್ಟಿರುತ್ತಾರೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ರಮೇಶ್ ಜಮೀನಿನ ಕಾವಲುಗಾರರನ್ನಾಗಿ ಸುಧಾರಣಿ ಮತ್ತು ಅವರ ಪತಿ ವೆಂಕಟಸ್ವಾಮಿ ಅವರನ್ನು ನೇಮಿಸಿಕೊಂಡಿರುತ್ತಾನೆ.

ಕೃಷ್ಣಪ್ಪನನ್ನು ಆಸ್ಪತ್ರೆಗೆ ಕರೆತಂದಾಗ ಆತ ಅಸ್ವಸ್ಥಗೊಂಡು ಸಾಯುವಂತೆ ಮಾಡಲಾಗುತ್ತದೆ. ನಂತರ ಶವವನ್ನು ನಂಜಪ್ಪ ಎಂದು ಬಿಂಬಿಸಿ ಕೆ.ಆರ್.ಪುರಂನ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಅಂತ್ಯಕ್ರಿಯೆಯನ್ನು ಸುಧಾರಾಣಿ ಅವರ ಪತಿ ವೆಂಕಟಸ್ವಾಮಿಯಿಂದ ಮಾಡಿಸಲಾಗುತ್ತದೆ. ಆತನನ್ನೇ ನಂಜಪ್ಪನ ಹೆಸರಿನಲ್ಲಿ ಸತ್ತು ಹೋದ ಕೃಷ್ಣಪ್ಪನ ಮಗ ಎಂದು ಬಿಂಬಿಸಲಾಗುತ್ತೆದೆ. ಕೃಷ್ಣಪ್ಪ ದೆವ್ವವಾಗಬಾರದು ಎಂಬ ಕಾರಣಕ್ಕೆ ಮುಕ್ತಿಕೊಡಿಸಲು ಚಿತಾಭಸ್ಮವನ್ನು ಶ್ರೀರಂಗಪಟ್ಟಣದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಎಲ್ಲಾ ಕೆಲಸಗಳನ್ನು ಮಾಡುವ ವೇಳೆ ವೆಂಕಟಸ್ವಾಮಿ ದಿನಾ ಮನೆಗೆ ತಡವಾಗಿ ಬರುತ್ತಿರುತ್ತಾನೆ. ಅದನ್ನು ಪ್ರಶ್ನಿಸಿ ಸುಧಾರಾಣಿ ಜಗಳವಾಡುತ್ತಾಳೆ. ಆಕೆಯನ್ನು ಸಮಾಧಾನಪಡಿಸಲು ಕೃಷ್ಣಪ್ಪನ ಕೊಲೆ ಪ್ರಕರಣವನ್ನು ವೆಂಕಟಸ್ವಾಮಿ ಬಾಯಿಬಿಟ್ಟಿರುತ್ತಾನೆ. ಆಕೆ ತನ್ನ ಪತಿ ಕೃಷ್ಣಪ್ಪನ ಕೊಲೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಅನಾಮಿಕ ಶವದ ಅಂತ್ಯಕ್ರಿಯೆಗಳನ್ನು ಮಾಡಿದ್ದಕ್ಕಾಗಿ ಇನ್ನಷ್ಟು ಜೋರು ಜಗಳವಾಡುತ್ತಾಳೆ.

ಮದ್ಯಪಾನ ಮಾಡಿ ಬಂದಿದ್ದ ವೆಂಕಟಸ್ವಾಮಿ ಸಿಟ್ಟಿನಲ್ಲಿ ಹಲ್ಲೆ ನಡೆಸುತ್ತಾನೆ. ಆಕೆ ಸತ್ತು ಹೋಗುತ್ತಾಳೆ. ಶವಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮೇಲ್ಛಾವಣಿ ಹೊಡೆದು ಹೊರ ಬಂದು ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ವೆಂಕಟಸ್ವಾಮಿ ಪ್ರಯತ್ನಿಸುತ್ತಾನೆ. ಆದರೆ, ಪೊಲೀಸರದ ಜಾಣತನದ ಮುಂದೆ ಕಾಳಕೋರರ ಅವತಾರಗಳು ಗುಟ್ಟಾಗಿ ಉಳಿಯದೆ ಬಯಲಾಗಿವೆ. ಸದ್ಯಕ್ಕೆ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನು ಮಾಲೀಕರಿಲ್ಲದೆ ಸರ್ಕಾರದ ಕೈವಾಸವಾಗುವ ಹಂತದಲ್ಲಿದೆ.

ಜಮೀನು ಸಲುವಾಗಿ ಬಲಿಕೊಡಲು ಕರೆತಂದಿದ್ದ ವೆಂಕಟರಮಣಪ್ಪ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಹಿಂದೆ-ಮುಂದೆ ಏನು ಗೊತ್ತಿಲ್ಲದ ಕೃಷ್ಣಪ್ಪ, ಗಂಡ ಒಳಿತನ್ನು ಬಯಸಿದ ಸುಧಾರಾಣಿ ಅನ್ಯಾಯವಾಗಿ ಬಲಿಯಾಗಿದ್ದಾರೆ.  ಪ್ರಕರಣದಲ್ಲಿ ಹವಲಹಳ್ಳಿ ಪೊಲೀಸರು ಕಿಂಗ್‍ಪಿನ್ ಬೆಳ್ಳತೂರು ರಮೇಶ್ (50), ಜನರನ್ನು ಸರಬರಾಜು ಮಾಡುತ್ತಿದ್ದ ಸಾಹುಕಾರ್ ಶಂಕರಪ್ಪ (55), ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಮಾಜಿ ಉಪನ್ಯಾಸಕ ಧನಂಜಯ್, ಸ್ಟಾಂಪ್‍ವೆಂಡರ್ ಕೃಷ್ಣಪ್ಪ, ರಿಯಲ್ ಎಸ್ಟೇಟ್ ಏಜೆಂಟ್ ಎಸ್.ಕೃಷ್ಣಮೂರ್ತಿ, ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್, ವಾರಸುದಾರರು ಇಲ್ಲದ ಜಮೀನನ್ನು ಹುಡುಕಿಕೊಡುತ್ತಿದ್ದ ಎಂ.ಕೇಶವಮೂರ್ತಿ, ಸುಧಾರಾಣಿ ಅವರ ಪತಿ ಎಂ.ವೆಂಕಟಸ್ವಾಮಿ (43) ಅವರನ್ನು ಬಂಧಿಸಿದ್ದು, ಇಂದು ಬೆಳಗ್ಗೆ ಡಾ.ಕುಲಕರ್ಣಿ ಅವರನ್ನೂ ಬಂಧಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಕೊಲೆ ಪ್ರಕರಣ ಮತ್ತು ಅದರ ಹಿಂದಿರುವ ರಿಯಲ್ ಎಸ್ಟೇಟ್ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಶಿವಕುಮಾರ್ ಸಮಗ್ರ ವಿವರಣೆ ನೀಡಿದರು. ಡಿವೈಎಸ್‍ಪಿ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ್ದ ಸಿಪಿಐ ಅಶ್ವತ್ಥನಾರಾಯಣ, ಪಿಎಸ್‍ಐ ರಘು ಹಾಗೂ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Facebook Comments

Sri Raghav

Admin