ಬೆಂಗಳೂರಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳ ಜೋಡಿ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Murder-n-01

ಬೆಂಗಳೂರು, ಸೆ.26- ಕಬ್ಬಿಣದ ರಾಡಿನಿಂದ ಹೊಡೆದು ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಸೋಂ ಮೂಲದ ವಿಕ್ರಂ (25) ಮತ್ತು ಸೈದುಲ್ಲಾ (26) ಕೊಲೆಯಾದ ಸೆಕ್ಯೂರಿಟಿ ಗಾರ್ಡ್ ಗಳು.  ದೊಡ್ಡಕಮ್ಮನಹಳ್ಳಿಯ ತೇಜಸ್ವಿನಿ ನಗರದ ಬಳಿ 18 ಎಕರೆ ವಿಸ್ತೀರ್ಣ ಹೊಂದಿರುವ ಸಿಟಿವಿಲ್ಲಾದಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದು, ವಿಕ್ರಂ, ಸೈದುಲ್ಲಾ ಸೇರಿ ಮೂವರು ಸೆಕ್ಯೂರಿಟಿ ಗಾರ್ಡ್‍ಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲ್ಲಿನ ಕೊಠಡಿಯೊಂದರಲ್ಲಿ ಈ ಮೂವರು ಸೆಕ್ಯೂರಿಟಿ ಗಾರ್ಡ್‍ಗಳು ಉಳಿದುಕೊಳ್ಳುತ್ತಿದ್ದರು.

ಕಳೆದ ರಾತ್ರಿ ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಕಬ್ಬಿಣದ ರಾಡಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ ಕೆಲಸಕ್ಕೆ ಬಂದ ಕೆಲಸಗಾರರು ಸೆಕ್ಯೂರಿಟಿ ಗಾರ್ಡ್ ರೂಮಿನ ಬಳಿ ರಕ್ತ ಇರುವುದು ನೋಡಿ ಅಲ್ಲಿದ್ದವರಿಗೆ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿದೆ.

ಈ ಜೋಡಿ ಕೊಲೆಯನ್ನು ಯಾರು, ಏತಕ್ಕಾಗಿ ಮಾಡಿದ್ದಾರೆಂಬ ಬಗ್ಗೆ ನಿಖರವಾಗಿ ಸದ್ಯಕ್ಕೆ ತಿಳಿದುಬಂದಿಲ್ಲ. ಸುದ್ದಿ ತಿಳಿದ ಡಿಸಿಪಿ ಡಾ.ಬೋರಲಿಂಗಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರ ಜತೆಯಲ್ಲಿದ್ದ ಇನ್ನೊಬ್ಬ ಸೆಕ್ಯೂರಿಟಿ ಗಾರ್ಡ್ ನಾಪತ್ತೆಯಾಗಿದ್ದು, ಆತನೇ ಇವರಿಬ್ಬರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin